India US Trade Agreement | ಅಮೆರಿಕಕ್ಕೆ ಮೊದಲ ಆದ್ಯತೆ: ಕ್ರಿಸ್ಟೋಫರ್ ಲ್ಯಾಂಡೌ
ನವದೆಹಲಿ: ಭಾರತದೊಂದಿಗಿನ ವ್ಯಾಪಾರ ಒಪ್ಪಂದದಲ್ಲಿ ಅಮೆರಿಕ ತನ್ನ ರಾಷ್ಟ್ರೀಯ ಹಿತಾಸಕ್ತಿಗಳಿಗೆ ಮೊದಲ ಆದ್ಯತೆ ನೀಡುತ್ತದೆ. ಎರಡು ದಶಕಗಳ ಹಿಂದೆ ಚೀನಾದೊಂದಿಗೆ ಮಾಡಿದ ತಪ್ಪುಗಳನ್ನು ಮತ್ತೆ ಮಾಡಲಾಗದು ಎಂದು ಅಮೆರಿಕದ ಉಪ ವಿದೇಶಾಂಗ ಕಾರ್ಯದರ್ಶಿ ಕ್ರಿಸ್ಟೋಫರ್ ಲ್ಯಾಂಡೌ ಗುರುವಾರ ಹೇಳಿದ್ದಾರೆ. ನವದೆಹಲಿಯಲ್ಲಿ ನಡೆದ ರೈಸಿನಾ ಸಂವಾದದಲ್ಲಿ ಮಾತನಾಡಿದ ಅವರು, ಚೀನಾದೊಂದಿಗಿನ ತನ್ನ ಹಿಂದಿನ ವ್ಯಾಪಾರ ಒಪ್ಪಂದದಿಂದ ಅಮೆರಿಕ ಪಾಠ ಕಲಿತಿದೆ.
ಹಾಗಾಗಿ ದೇಶದ ಹಿತಾಸಕ್ತಿಗಳನ್ನು ಗಮನದಲ್ಲಿರಿಸಿಕೊಂಡೇ ಭಾರತದೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ.
ನಾವು ಏನೇ ಮಾಡಿದರೂ ಅದು ನಮ್ಮ ಜನರಿಗೆ ನ್ಯಾಯಯುತವಾಗಿರುವುದನ್ನು ನಾವು ಖಚಿತಪಡಿಸಿಕೊಳ್ಳಲಿದ್ದೇವೆ. ಏಕೆಂದರೆ, ಭಾರತ ಸರ್ಕಾರ ತನ್ನ ಜನರಿಗೆ ಉತ್ತರದಾಯಿಯಾಗಿರುವಂತೆ, ನಾವು ಕೂಡ ನಮ್ಮ ದೇಶದ ನಾಗರಿಕರಿಗೆ ಉತ್ತರದಾಯಿಗಳಾಗಿರಬೇಕು ಎಂದು ಪ್ರತಿಪಾದಿಸಿದ್ದಾರೆ.
ಅಮೆರಿಕಕ್ಕೆ ಮೊದಲ ಆದ್ಯತೆ ಎಂದರೆ ಕೇವಲ ಅಮೆರಿಕ ಮಾತ್ರ ಎಂದಲ್ಲ. ಆರ್ಥಿಕ ಮತ್ತು ಕಾರ್ಯತಂತ್ರದ ಗುರಿಗಳನ್ನು ಸಾಧಿಸಲು ಭಾರತದಂತಹ ಪಾಲುದಾರರೊಂದಿಗೆ ಸಹಕಾರ ಅತ್ಯಗತ್ಯ ಎಂದೂ ಅವರು ಹೇಳಿದ್ದಾರೆ.