ರೇಷ್ಮೆ ನಾಡಿಗೆ ಸಿಎಂ ಸಿದ್ದು ಸಿಹಿ ಸುದ್ದಿ; 5 ಜಿಲ್ಲೆಗಳಲ್ಲಿ 'ಸಿಲ್ಕ್ ಪಾರ್ಕ್' ಸ್ಥಾಪನೆ!
ದೇಶದ ರೇಷ್ಮೆ ರಾಜಧಾನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕರ್ನಾಟಕದ ರೇಷ್ಮೆ ಬೆಳೆಗಾರರು ಮತ್ತು ಉದ್ದಿಮೆದಾರರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ (ಮಾ.06)ಮಂಡಿಸಿದ ಬಜೆಟ್‌ನಲ್ಲಿ ಹಲವು ಪ್ರೋತ್ಸಾಹದಾಯಕ ಯೋಜನೆಗಳನ್ನು ಘೋಷಿಸಿದ್ದಾರೆ.
ರೇಷ್ಮೆ ಮಾರುಕಟ್ಟೆ ನವೀಕರಣ ಮತ್ತು ಸಾರಿಗೆ ಸಹಾಯಧನ ಹೆಚ್ಚಳಕ್ಕೆ ಈ ಬಾರಿ ವಿಶೇಷ ಒತ್ತು ನೀಡಲಾಗಿದೆ.
ರೇಷ್ಮೆ ವಲಯದ ಪ್ರಮುಖ ಘೋಷಣೆಗಳು
-ಭಾರತದ ರೇಷ್ಮೆ ಉತ್ಪಾದನೆಯಲ್ಲಿ ಶೇ.46 ರಷ್ಟು ಪಾಲು ಹೊಂದಿರುವ ಕರ್ನಾಟಕವು ದೇಶದ ರೇಷ್ಮೆ ರಾಜಧಾನಿಯಾಗಿದೆ.
ರಾಜ್ಯದ ಅಭಿವೃದ್ಧಿಗೆ ಅಗತ್ಯವಿರುವ ರೀಲಿಂಗ್ ಶೆಡ್ ನಿರ್ಮಾಣ, ಹನಿ ನೀರಾವರಿ ಘಟಕ ಮುಂತಾದ ಚಟುವಟಿಕೆಗಳಿಗೆ ಕಳೆದ ಮೂರು ವರ್ಷಗಳಲ್ಲಿ 531 ಕೋಟಿ ರೂ. ಮೊತ್ತದ ಸಹಾಯಧನವನ್ನು 2 ಲಕ್ಷ ಫಲಾನುಭವಿಗಳಿಗೆ ಒದಗಿಸಲಾಗಿದೆ
-ಪ್ರಮುಖ 15 ರೇಷ್ಮೆಗೂಡು ಮಾರುಕಟ್ಟೆಗಳಲ್ಲಿ ಸಂಪೂರ್ಣ ನಗದುರಹಿತ, ಡಿಜಿಟಲ್ ವಹಿವಾಟು, ಇ-ಹರಾಜು, ಇ-ಪೇಮೆಂಟ್ ಮತ್ತು ಇ-ಪಾವತಿ ವ್ಯವಸ್ಥೆಯನ್ನು ಆರಂಭಿಸಿದ ದೇಶದ ಮೊದಲ ಮತ್ತು ಏಕೈಕ ರಾಜ್ಯ ಕರ್ನಾಟಕ ಎಂಬುದು ಹೆಮ್ಮೆಯ ವಿಷಯವಾಗಿದೆ. -ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಉತ್ಪಾದಿಸುವ ರೇಷ್ಮೆಗೂಡನ್ನು ಸರ್ಕಾರದ ಯಾವುದೇ ರೇಷ್ಮೆಗೂಡಿನ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಪ್ರತಿ ಕೆ.ಜಿ.
ಗೂಡಿಗೆ ಇರುವ 10 ರೂ. ಸಾಗಾಣಿಕಾ ವೆಚ್ಚವನ್ನು 20 ರೂ. ಗೆ ಹೆಚ್ಚಿಸಲಾಗುವುದು.
-ರಾಮನಗರ, ಶಿಡ್ಲಘಟ್ಟ, ಹಾವೇರಿ, ತಾಂಡವಪುರ (ಮೈಸೂರು) ಹಾಗೂ ಕಲಬುರಗಿಯಲ್ಲಿ ಸಿಲ್ಕ್ ಪಾರ್ಕ್‌ಗಳ ಸ್ಥಾಪನೆಗೆ ಕ್ರಮವಹಿಸಲಾಗುವುದು.
-ರೇಷ್ಮೆ ಇಲಾಖೆಯ ಆಯ್ದ ಕ್ಷೇತ್ರಗಳಲ್ಲಿ ಲಭ್ಯವಿರುವ ಜಮೀನಿನಲ್ಲಿ ರೈತ ಉದ್ಯಮಿ ಹಾಗೂ ರೈತ ಉತ್ಪಾದಕ ಸಂಸ್ಥೆಗಳ ಸಹಯೋಗದೊಂದಿಗೆ ಚಾಕಿ ಸಾಕಾಣಿಕೆ ಕೇಂದ್ರಗಳನ್ನು ಸ್ಥಾಪಿಸಲಾಗುವುದು.