ಐತಿಹಾಸಿಕ ಹೆಜ್ಜೆ: ಕಾನ್‌ಸ್ಟೆಬಲ್‌ಗಳ ಮನೆ ಕೆಲಸಕ್ಕೆ ಬಳಸುವ ಕಾಲೋನಿಯಲ್ ‘ಆರ್ಡರ್ಲಿ’ ಪದ್ಧತಿ ಕೊನೆಗೂ ರದ್ದು, ರಾಜ್ಯ ಪೊಲೀಸ್ ಇಲಾಖೆ ದಿಟ್ಟ ನಿರ್ಧಾರ..!
ಆರ್ಡರ್ಲಿ ಪದ್ಧತಿ ಬ್ರಿಟಿಷ್ ಕಾಲದಲ್ಲಿ ಆರಂಭವಾದ ವ್ಯವಸ್ಥೆ. ಈ ವ್ಯವಸ್ಥೆಯಡಿ ಪೊಲೀಸ್ ಕಾನ್ಸ್‌ಟೇಬಲ್‌ಗಳನ್ನು ಹಿರಿಯ ಅಧಿಕಾರಿಗಳ ಮನೆಗಳಿಗೆ ನಿಯೋಜಿಸಿ, ಅವರ ವೈಯಕ್ತಿಕ ಕೆಲಸಗಳನ್ನು ಮಾಡಿಸುವ ಪದ್ಧತಿ ನಡೆದುಬಂದಿತ್ತು. ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ದೀರ್ಘಕಾಲದಿಂದ ನಡೆದುಬಂದಿದ್ದ ‘ಆರ್ಡರ್ಲಿ’ ಪದ್ಧತಿ ಕೊನೆಗೂ ಅಂತ್ಯಗೊಂಡಿದೆ.
ರಾಜ್ಯ ಪೊಲೀಸ್ ಮಹಾನಿರ್ದೇಶಕ ಎಂ.ಎ. ಸಲೀಂ ಅವರ ಆದೇಶ ಹಿನ್ನೆಲೆ ಕಾಲೋನಿಯಲ್ ಯುಗದ ಆರ್ಡರ್ಲಿ ಪದ್ಧತಿ ರದ್ದುಪಡಿಸಲಾಗಿದ್ದು, ಇದನ್ನು ಪೊಲೀಸ್ ವ್ಯವಸ್ಥೆಯಲ್ಲಿ ಮಹತ್ವದ ಹೆಜ್ಜೆಯೆಂದು ಪರಿಗಣಿಸಲಾಗುತ್ತಿದೆ.
ಏನಿದು ‘ಆರ್ಡರ್ಲಿ’ ಪದ್ಧತಿ ?
ಆರ್ಡರ್ಲಿ ಪದ್ಧತಿ ಬ್ರಿಟಿಷ್ ಕಾಲದಲ್ಲಿ ಆರಂಭವಾದ ವ್ಯವಸ್ಥೆ.
ಈ ವ್ಯವಸ್ಥೆಯಡಿ ಪೊಲೀಸ್ ಕಾನ್ಸ್‌ಟೇಬಲ್‌ಗಳನ್ನು ಹಿರಿಯ ಅಧಿಕಾರಿಗಳ ಮನೆಗಳಿಗೆ ನಿಯೋಜಿಸಿ, ಅವರ ವೈಯಕ್ತಿಕ ಕೆಲಸಗಳನ್ನು ಮಾಡಿಸುವ ಪದ್ಧತಿ ನಡೆದುಬಂದಿತ್ತು.
ಅಡುಗೆ ಮಾಡುವುದು, ಮನೆ ಸ್ವಚ್ಛಗೊಳಿಸುವುದು, ಮಕ್ಕಳನ್ನು ಶಾಲೆಗೆ ಕರೆದೊಯ್ಯುವುದು ಸೇರಿದಂತೆ ಹಲವಾರು ಮನೆ ಕೆಲಸಗಳಿಗೆ ಪೊಲೀಸ್ ಸಿಬ್ಬಂದಿಯನ್ನು ಬಳಸಿಕೊಳ್ಳಲಾಗುತ್ತಿತ್ತು.
ಸ್ವಾತಂತ್ರ್ಯದ ನಂತರವೂ ಈ ಪದ್ಧತಿ ಕೆಲವು ರಾಜ್ಯಗಳಲ್ಲಿ ಮುಂದುವರಿದಿದ್ದು, ಕಾಲಕ್ರಮೇಣ ಇದರ ಬಗ್ಗೆ ಟೀಕೆಗಳು ಹೆಚ್ಚಾಗಿದ್ದವು. ಪೊಲೀಸ್ ಸಿಬ್ಬಂದಿಯನ್ನು ಸಾರ್ವಜನಿಕ ಸೇವೆಗಾಗಿ ನೇಮಕ ಮಾಡಲಾಗಿದ್ದರೂ, ಅವರನ್ನು ಹಿರಿಯ ಅಧಿಕಾರಿಗಳ ಮನೆ ಕೆಲಸಗಳಿಗೆ ಬಳಸುವುದು ನ್ಯಾಯಸಮ್ಮತವಲ್ಲ ಎಂಬ ಅಭಿಪ್ರಾಯ ಹಲವು ವರ್ಷಗಳಿಂದ ಕೇಳಿಬರುತ್ತಿತ್ತು.