ನ್ಯಾಯೋಚಿತವಲ್ಲದ ವ್ಯಾಪಾರ: ಭಾರತ ಸೇರಿ 16 ದೇಶಗಳ ವಿರುದ್ಧ ತನಿಖೆಗೆ ಟ್ರಂಪ್ ನಿರ್ಧಾರ
ನ್ಯೂಯಾರ್ಕ್: ಭಾರತವೂ ಸೇರಿ 16 ದೇಶಗಳ ವಿರುದ್ಧ ಅಮೆರಿಕದ ಡೊನಾಲ್ಡ್ ಟ್ರಂಪ್ ಸರ್ಕಾರ ಇದೀಗ 'ನ್ಯಾಯೋಚಿತವಲ್ಲದ ವ್ಯಾಪಾರ ನಡವಳಿಕೆ' ಆರೋಪದ ಮೇಲೆ ತನಿಖೆ ನಡೆಸಲು ಮುಂದಾಗಿದೆ. ತನ್ನ ಈ ಹಿಂದಿನ ಪ್ರತಿ ತೆರಿಗೆ ನೀತಿಯನ್ನು ಅಮೆರಿಕಾದ ಸುಪ್ರೀಂಕೋರ್ಟ್ ರದ್ದು ಮಾಡಿರುವ ಹಿನ್ನೆಲೆಯಲ್ಲಿ ಹೊಸ ರೂಪದಲ್ಲಿ ತೆರಿಗೆ ಹೇರಲು ಟ್ರಂಪ್ ಸರ್ಕಾರ ಈ ಅಡ್ಡದಾರಿ ಹಿಡಿದಿದೆ ಎಂದು ಹೇಳಲಾಗಿದೆ. ವ್ಯಾಪಾರ ಪಾಲುದಾರರ ನ್ಯಾಯೋಚಿತವಲ್ಲದ ವ್ಯಾಪಾರ ನಡವಳಿಕೆಯು ಅಮೆರಿಕದ ಉತ್ಪಾದನಾ ವಲಯಕ್ಕೆ ವ್ಯತಿರಿಕ್ತ ಪರಿಣಾಮ ಬೀರಲಿದೆಯೇ ಎಂಬ ಕುರಿತು ತನಿಖೆ ನಡೆಯಲಿದೆ.
ಈ ತನಿಖೆಯನ್ನು 1974ರ ವ್ಯಾಪಾರ ಒಪ್ಪಂದದ 301(ಬಿ) ಸೆಕ್ಷನ್ ಅಡಿ ಆರಂಭಿಸಲಾಗಿದೆ ಎಂದು ಅಮೆರಿಕದ ವ್ಯಾಪಾರ ಪ್ರತಿನಿಧಿ ಜೆಮಿಸನ್ ಗ್ರೀರ್ ತಿಳಿಸಿದ್ದಾರೆ. ಈ ಕಾಯ್ದೆಯು ನ್ಯಾಯೋಚಿತವಲ್ಲದ ವ್ಯಾಪಾರ ಪದ್ಧತಿ ಅನುಸರಿಸುತ್ತಿರುವ ದೇಶಗಳ ವಿರುದ್ಧ ಅಮೆರಿಕಕ್ಕೆ ತೆರಿಗೆ ಹೇರಲು ಅವಕಾಶ ಮಾಡಿಕೊಡಲಿದೆ ಎಂದು ಗ್ರೀರ್ ಹೇಳಿದ್ದಾರೆ.
ಯಾವ್ಯಾವ ದೇಶಗಳು?: ಭಾರತ ಮಾತ್ರವಲ್ಲದೆ, ಚೀನಾ, ಯುರೋಪಿಯನ್ ಯೂನಿಯನ್ (ಇಯು ಸದಸ್ಯ ದೇಶಗಳು), ಜಪಾನ್, ಕೊರಿಯಾ, ವಿಯೆಟ್ನಾಂ, ಬಾಂಗ್ಲಾದೇಶ, ಥಾಯ್ಲೆಂಡ್, ಕಾಂಬೋಡಿಯಾ, ಮಲೇಷ್ಯಾ, ಇಂಡೋನೇಷ್ಯಾ, ತೈವಾನ್, ಸಿಂಗಾಪುರ, ಮೆಕ್ಸಿಕೋ, ಸ್ವಿಜರ್‌ಲೆಂಡ್, ನಾರ್ವೆ ದೇಶಗಳ ವಿರುದ್ಧ ಅಮೆರಿಕವು ಇದೀಗ ತನಿಖೆ ನಡೆಸಲು ನಿರ್ಧರಿಸಿದೆ.