ಉಪ ಚುನಾವಣೆ: ಕಾಂಗ್ರೆಸ್ನಲ್ಲಿ ಬಗೆಹರಿಯದ ಟಿಕೆಟ್ ಕಗ್ಗಂಟು; ಮುಂದುವರಿದ ಗೊಂದಲ
ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಉಪ ಚುನಾವಣೆಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ಕಗ್ಗಂಟಾಗಿದೆ. ಬಾಗಲಕೋಟೆಯಲ್ಲಿ ಮೇಟಿ ಕುಟುಂಬದೊಳಗೆ ಟಿಕೆಟ್‌ಗಾಗಿ ತೀವ್ರ ಪೈಪೋಟಿ ನಡೆದಿದ್ದರೆ, ದಾವಣಗೆರೆ ದಕ್ಷಿಣದಲ್ಲಿ ಅಲ್ಪಸಂಖ್ಯಾತ ಸಮುದಾಯ ಮತ್ತು ಸಚಿವ ಮಲ್ಲಿಕಾರ್ಜುನ್ ಪುತ್ರನ ನಡುವೆ ಟಿಕೆಟ್ ಗುದ್ದಾಟ ಸೃಷ್ಟಿಯಾಗಿದೆ. ಅಭ್ಯರ್ಥಿ ವಿಚಾರದಲ್ಲಿ ಕಾಂಗ್ರೆಸ್ ನಾಯಕರ ನಡುವೆಯೇ ಭಿನ್ನಾಭಿಪ್ರಾಯ ವ್ಯಕ್ತವಾಗುತ್ತಿರುವ ಕಾರಣ ಈವರೆಗೀ ಯಾವುದೇ ಸ್ಪಷ್ಟತೆ ಸಿಕ್ಕಿಲ್ಲ ಎನ್ನಲಾಗಿದೆ.
ಬೆಂಗಳೂರು, ಮಾರ್ಚ್ 19: ದಾವಣೆಗೆರೆ ದಕ್ಷಿನ ಮತ್ತು ಬಾಗಲಕೋಟೆ ಉಪ ಚುನಾವಣೆಗಳಿಗೆ ವಿಪಕ್ಷ ಬಿಜೆಪಿ ಈಗಾಗಲೇ ತನ್ನ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಿದೆ. ಆದರೆ ಆಡಳಿತಾರೂಢ ಕಾಂಗ್ರೆಸ್ನಲ್ಲಿ ಈ ಬಗ್ಗೆ ಗೊಂದಲ ಮುಂದುವರಿದಿದ್ದು ಅಭ್ಯರ್ಥಿಗಳ ಆಯ್ಕೆಯೇ ಕಗ್ಗಂಟಾಗಿ ಮಾರ್ಪಟ್ಟಿದೆ. ಬಾಗಲಕೋಟೆಯಲ್ಲಿ ಮೇಟಿ ಕುಟುಂಬಸ್ಥರಿಗೇ ಟಿಕೆಟ್ ಪಕ್ಕಾ ಎನ್ನಲಾಗಿದ್ದರೂ ನಾಲ್ವರು ಮಕ್ಕಳ ಪೈಕಿ ಯಾರಿಗೆ ಪಕ್ಷ ಮಣೆ ಹಾಕಲಿದೆ ಎಂಬ ಪ್ರಶ್ನೆ ಸದ್ಯ ಉದ್ಭವಿಸಿದೆ. ಮತ್ತೊಂದೆಡೆ ದಾವಣಗೆರೆ ದಕ್ಷಿಣ ಕ್ಕ್ಷೆತ್ರದಲ್ಲಿ ಟಿಕೆಟ್‌ಗಾಗಿ ಕೈಮನೆಯ ಒಳಗೆಯೇ ಭಾರಿ ಗುದ್ದಾಟ ನಡೆಯುತ್ತಿರುವ ಕಾರಣ ಅಭ್ಯರ್ಥಿ ಯಾರಾಗಬಹುದೆಂಬ ಬಗ್ಗೆ ಸ್ವಪಕ್ಷ ನಾಯಕರಿಗೇ ಸ್ಪಷ್ಟತೆ ಸಿಕ್ಕಿಲ್ಲ.
ಬಾಗಲಕೋಟೆ ಉಪಚುನಾವಣೆ ಟಿಕೆಟ್ ವಿಚಾರವಾಗಿ ಹೆಚ್.ವೈ. ಮೇಟಿ ಅವರ ಮಕ್ಕಳ ನಡುವೆಯೇ ದಂಗಲ್ ಶುರುವಾಗಿದೆ. ಈ ಕುಟುಂಬದರೇ ಪಕ್ಕಾ ಕಾಂಗ್ರೆಸ್ ಕ್ಯಾಂಡಿಡೇಟ್ ಎನ್ನಲಾಗಿದ್ದರೂ ಮೇಟಿ ಮಕ್ಕಳ ಪೈಕಿ ಯಾರನ್ನು ಪಕ್ಷ ಆಯ್ಕೆ ಮಾಡಲಿದೆ ಎಂಬ ಗೊಂದಲ ಉದ್ಭವಿಸಿದೆ. ಯಾರಿಗೆ ಟಿಕೆಟ್ ಸಿಕ್ಕರೂ ಒಗ್ಗಟ್ಟಾಗಿ ಕೆಲಸ ಮಾಡುವಂತೆ ಮೇಟಿ ಮಕ್ಕಳಿಗೆ ಸಿಎಂ ಸಲಹೆ, ಸೂಚನೆಯನ್ನು ಅದಾಗಲೇ ನೀಡಿದ್ದಾರೆ. ಹೀಗಿದ್ದರೂ ಟಿಕೆಟ್ ಕೊಡದಿದ್ದರೆ ಬಂಡಾಯ ಸ್ಪರ್ಧೆ ಎಂದು ಮೇಟಿಯವರ ಕಿರಿಯ ಪುತ್ರಿ ಮಹಾದೇವಿ ಮೇಟಿ ಹೇಳುತ್ತಿರೋದು ತಲೆನೋವಾಗಿ ಮಾರ್ಪಟ್ಟಿದೆ. ಮಲ್ಲಿಕಾರ್ಜುನ ಮೇಟಿ ಅಥವಾ ಉಮೇಶ್ ಮೇಟಿ ಇಬ್ಬರಲ್ಲಿ ಒಬ್ಬರಿಗೆ ಟಿಕೆಟ್ ನೀಡಲು ಕೈ ನಾಯಕರು ಚರ್ಚೆ ನಡೆಸಿದ್ದು, ಆ ಪೈಕಿ ಉಮೇಶ್ ಮೇಟಿಗೆ ಬಹುತೇಕ ಟಿಕೆಟ್ ಸಿಗುವ ಸಾಧ್ಯತೆ ಇದೆ. ಒಂದೊಮ್ಮೆ ಹೀಗೇ ಆದಲ್ಲಿ ಮಹಾದೇವಿ ಮೇಟಿ ನಡೆ ಏನು ಎಂಬ ಬಗ್ಗೆಯೂ ಕುತೂಹಲ ಹೆಚ್ಚಿದೆ.