Bengaluru Cab Scam: ₹285ರ ಟ್ರಿಪ್‌ಗೆ ₹5,950 ಬಿಲ್! ಬೆಂಗಳೂರಲ್ಲಿ ಕ್ಯಾಬ್ ಡ್ರೈವರ್‌ಗಳ ಹೊಸ ಕಳ್ಳಾಟ ಬಯಲು
ಬೆಂಗಳೂರಿನಲ್ಲಿ ಟ್ಯಾಕ್ಸಿ ಡ್ರೈವರ್‌ಗಳು ಪ್ರಯಾಣಿಕರನ್ನು ಸುಲಿಯಲು ಹೊಸ ದಾರಿ ಕಂಡುಕೊಂಡಿದ್ದಾರೆ. ಬೆಂಗಳೂರಿನ ಮೆಜೆಸ್ಟಿಕ್‌ನಿಂದ ಜಾಲಹಳ್ಳಿಗೆ ಓಲಾ ಕ್ಯಾಬ್ ಬುಕ್ ಮಾಡಿದ ಪ್ರಯಾಣಿಕರೊಬ್ಬರಿಗೆ ವಿಚಿತ್ರ ಅನುಭವವಾಗಿದೆ. ಆ್ಯಪ್‌ನಲ್ಲಿ ₹285 ಎಂದು ತೋರಿಸಿದ ಟ್ರಿಪ್‌ಗೆ, ಡ್ರೈವರ್ ತನ್ನ ಪರ್ಸನಲ್ ಫೋನ್‌ನಲ್ಲಿ ₹5,950 ಬಿಲ್ ತೋರಿಸಿ ಹಣಕ್ಕೆ ಪೀಡಿಸಿದ್ದಾನೆ. ಈ ಘಟನೆಯನ್ನು ಪ್ರಯಾಣಿಕರು ಎಕ್ಸ್ (ಹಿಂದಿನ ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡಿದ್ದು, ಕೆಲ ಚಾಲಕರು ಅಮಾಯಕ ಗ್ರಾಹಕರನ್ನು ಹೇಗೆ ವಂಚಿಸುತ್ತಿದ್ದಾರೆ ಎಂಬುದನ್ನು ಬಯಲು ಮಾಡಿದ್ದಾರೆ.
'ಹಿಂದೆ ನಾನು ಕೆಲವು ರೈಡ್‌ಗಳನ್ನು ಕ್ಯಾನ್ಸಲ್ ಮಾಡಿದ್ದೆ, ಆ ಹಣವನ್ನು ಈಗ ಕೊಡದಿದ್ದರೆ ತನ್ನ ಅಕೌಂಟ್‌ನಿಂದ ಕಟ್ ಆಗುತ್ತದೆ ಎಂದು ಡ್ರೈವರ್ ವಾದಿಸಿದ. ನನ್ನ ಆ್ಯಪ್‌ನಲ್ಲಿ ₹285 ಮಾತ್ರ ತೋರಿಸುತ್ತಿದೆ ಎಂದು ಹೇಳಲು ಪ್ರಯತ್ನಿಸಿದಾಗ, ಚಾಲಕ ರೇಗಾಡಲು ಶುರು ಮಾಡಿದ. ₹5950 ಕೊಡಲೇಬೇಕು ಎಂದು ಪದೇ ಪದೇ ಪಟ್ಟು ಹಿಡಿದ' ಎಂದು ಪ್ರಯಾಣಿಕರು ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ಚಾಲಕ ಹೆಚ್ಚಾಗಿ ಕನ್ನಡದಲ್ಲೇ ಮಾತನಾಡುತ್ತಿದ್ದರಿಂದ, ಕನ್ನಡ ಬಾರದ ಪ್ರಯಾಣಿಕರಿಗೆ ಪರಿಸ್ಥಿತಿ ನಿಭಾಯಿಸುವುದು ಕಷ್ಟವಾಗಿ, ಒತ್ತಡದ ಸನ್ನಿವೇಶ ನಿರ್ಮಾಣವಾಗಿತ್ತು. ಈ ಬಗ್ಗೆ ಓಲಾ ಕಂಪನಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ.
ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ, ನೆಟ್ಟಿಗರು ಪ್ರಯಾಣಿಕರ ಪರವಾಗಿ ನಿಂತಿದ್ದಾರೆ. ಇಂತಹ ಸಮಯದಲ್ಲಿ ತಕ್ಷಣ ಪೊಲೀಸರಿಗೆ ಕರೆ ಮಾಡಬೇಕಿತ್ತು ಎಂದು ಹಲವರು ಸಲಹೆ ನೀಡಿದ್ದಾರೆ. 'ಈ ರೀತಿ ಆದಾಗ ತಕ್ಷಣ 112ಕ್ಕೆ ಕರೆ ಮಾಡಿ, ಅವರು 5 ರಿಂದ 10 ನಿಮಿಷದಲ್ಲಿ ಸ್ಥಳಕ್ಕೆ ಬರುತ್ತಾರೆ' ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.'ನನಗೂ ಹೀಗೆ ಆಗಿದೆ, ಅವರು 'ಇದು ಎಮರ್ಜೆನ್ಸಿ ಅಲ್ಲ' ಅಂತ ಹೇಳಿ ಫೋನ್ ಕಟ್ ಮಾಡುತ್ತಾರೆ. ಇದು ನಿಜಕ್ಕೂ ಬೇಸರದ ಸಂಗತಿ' ಎಂದು ಮತ್ತೊಬ್ಬರು ತಮ್ಮ ಅನುಭವ ಹಂಚಿಕೊಂಡಿದ್ದಾರೆ.