ಡ್ಯಾಡಿ, ಮೋದಿ, ಚಿನ್ನ ಮೋದಿ ವಿರುದ್ಧ ನನ್ನ ಹೋರಾಟ: ಕೆ.ಕವಿತಾ
ಹೈದರಾಬಾದ್: ನನ್ನ ಹೋರಾಟ ಏನಿದ್ದರೂ ಡ್ಯಾಡಿ, ಮೋದಿ ಮತ್ತು ಚಿನ್ನ(ಜ್ಯೂನಿಯರ್) ಮೋದಿ ವಿರುದ್ಧ ಇರಲಿದೆ ಎಂದು ಬಿಆರ್‌ಎಸ್ ಮಾಜಿ ಸಂಸದೆ ಕೆ.ಕವಿತಾ ಹೇಳಿದ್ದಾರೆ. ಹೊಸ ಪಕ್ಷ ಘೋಷಣೆ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಕವಿತಾ ಅವರು ಈ ಮೇಲಿನ ಹೇಳಿಕೆ ನೀಡಿದ್ದಾರೆ. ತಮ್ಮ ತಂದೆಯೂ ಆಗಿರುವ ಮಾಜಿ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್, ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.
ಇದೇ ವೇಳೆ ಪಕ್ಷದ ಸಿದ್ಧಾಂತದ ಬಗ್ಗೆ ಮಾತನಾಡಿದ ಅವರು, ಎಲ್ಲರ ಪ್ರಗತಿಯನ್ನು ಬಯಸುವ ಗಾಂಧೀಜಿಯವರ 'ಸರ್ವೋದಯ' ತತ್ವವನ್ನು ನಮ್ಮ ಪಕ್ಷ ಅಳವಡಿಸಿಕೊಳ್ಳಲಿದೆ ಎಂದು ತಿಳಿಸಿದ್ದಾರೆ.
ಪಕ್ಷದ ಪ್ರಧಾನ ಕಚೇರಿ ನಿರ್ಮಾಣಕ್ಕಾಗಿ ಹೈದರಾಬಾದ್‌ನಲ್ಲಿ ಭೂಮಿಯನ್ನು ಹುಡುಕುತ್ತಿದ್ದು, ತಮ್ಮ ಪಕ್ಷದಲ್ಲಿ ಯುವಕರಿಗೆ ಮತ್ತು ತೆಲಂಗಾಣ ಪ್ರತ್ಯೇಕ ರಾಜ್ಯ ಚಳವಳಿಯಲ್ಲಿ ಹೋರಾಡಿದವರಿಗೆ ಆದ್ಯತೆ ನೀಡುವುದಾಗಿ ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಸಿಪಿಐ(ಎಂ), ಸಿಪಿಐಎಂಎಲ್ (ನ್ಯೂ ಡೆಮಾಕ್ರಸಿ), ಧರ್ಮ ಸಮಾಜ ಪಕ್ಷದ ವಿಶಾರದನ್ ಮಹಾರಾಜ್ ಮತ್ತು ವಿವಿಧ ಜನಪರ ಸಂಘಟನೆಗಳೊಂದಿಗೆ ಸೇರಿ ಕೆಲಸ ಮಾಡುವುದಾಗಿ ತಿಳಿಸಿದ ಅವರು, ಯಾರೊಂದಿಗೂ ರಾಜಿ ಆಗುವುದಿಲ್ಲ ಎಂದಿದ್ದಾರೆ.
ಮುಂದುವರಿದು, ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ಬಿಆರ್‌ಎಸ್ ಮತ್ತು ನನ್ನ ನಡುವಿನ ಭಿನ್ನಾಭಿಪ್ರಾಯಗಳನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.