Jammu: ಇರಾನ್ ಮೇಲಿನ ಯುದ್ಧ ಅಕ್ರಮ ಹಾಗೂ ಕಾನೂನುಬಾಹಿರ: ಸಿಎಂ ಒಮರ್ ಅಬ್ದುಲ್ಲಾ
ಜಮ್ಮು: ಇರಾನ್ ಮೇಲೆ ಹೇರಲಾಗಿರುವ ಯುದ್ಧವನ್ನು "ಅನ್ಯಾಯ ಮತ್ತು ಕಾನೂನುಬಾಹಿರ" ಎಂದು ಬಣ್ಣಿಸಿರುವ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ಮಾನವೀಯತೆಯ ದೃಷ್ಟಿಯಿಂದ ಈ ಸಂಘರ್ಷವನ್ನು ಕೊನೆಗಾಣಿಸಲು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ರಾಜತಾಂತ್ರಿಕ ಪ್ರಭಾವವನ್ನು ಬಳಸಬೇಕು ಎಂದು ಮನವಿ ಮಾಡಿದ್ದಾರೆ.
ಶುಕ್ರವಾರ ನಡೆದ ವಿಧಾನಸಭೆಯ ಬಜೆಟ್ ಅಧಿವೇಶನದಲ್ಲಿ ಇರಾನ್ ಬಿಕ್ಕಟ್ಟಿನ ಕುರಿತು ಸುದೀರ್ಘ ಚರ್ಚೆ ನಡೆಯಿತು. ಈ ವೇಳೆ ಸದನದ ನಾಯಕನಾಗಿ ಮಾತನಾಡಿದ ಒಮರ್ ಅಬ್ದುಲ್ಲಾ, ಯುದ್ಧದ ಭೀಕರತೆಯನ್ನು ಖಂಡಿಸಿದರು.
ವಿಧಾನಸಭೆಯಲ್ಲಿ ಗದ್ದಲ, ಘೋಷಣೆ
ಅಧಿವೇಶನ ಆರಂಭವಾಗುತ್ತಿದ್ದಂತೆಯೇ ನ್ಯಾಷನಲ್ ಕಾನ್ಫರೆನ್ಸ್, ಕಾಂಗ್ರೆಸ್, ಪಿಡಿಪಿ ಮತ್ತು ಸಿಪಿಐ(ಎಂ) ಶಾಸಕರು ಇರಾನ್ ಪರ ಘೋಷಣೆಗಳನ್ನು ಕೂಗಿದರು.
ಇದಕ್ಕೆ ಪ್ರತಿಯಾಗಿ ಬಿಜೆಪಿ ಶಾಸಕರು ಜಮ್ಮುವಿನಲ್ಲಿ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ ಸ್ಥಾಪನೆಗೆ ಆಗ್ರಹಿಸಿ ಗದ್ದಲ ನಡೆಸಿದರು. "ಇರಾನ್ ಬಿಕ್ಕಟ್ಟು ಅಂತರಾಷ್ಟ್ರೀಯ ವಿಷಯ, ಇದು ಸದನದ ವ್ಯಾಪ್ತಿಗೆ ಬರುವುದಿಲ್ಲ" ಎಂದು ಬಿಜೆಪಿ ವಾದಿಸಿತು. ಗದ್ದಲ ತಾರಕಕ್ಕೇರಿದಾಗ ಸ್ಪೀಕರ್ ಅಬ್ದುಲ್ ರಹೀಂ ರಾಥರ್ ಸದನವನ್ನು ಅರ್ಧ ಗಂಟೆ ಮುಂದೂಡಿದರು.
ಮಾನವೀಯತೆ ಹತ್ತಿಕ್ಕಲಾಗುತ್ತಿದೆ: ಒಮರ್
ಇರಾನ್ ಮೇಲೆ ಹೇರಲಾದ ಈ ಯುದ್ಧವನ್ನು ನಾನು ಬಲವಾಗಿ ಖಂಡಿಸುತ್ತೇನೆ. ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಮತ್ತು ಅವರ ಸಹಚರರ ಸಾವಿಗೆ ಸಂತಾಪ ಸೂಚಿಸುತ್ತೇನೆ. ಶಾಲೆಗಳ ಮೇಲೆ ಬಾಂಬ್ ದಾಳಿ ನಡೆಸಿ ವಿದ್ಯಾರ್ಥಿನಿಯರನ್ನು ಕೊಲ್ಲುತ್ತಿರುವುದು ಅತ್ಯಂತ ಭೀಕರ ಕೃತ್ಯ ಎಂದು ಬೇಸರ ವ್ಯಕ್ತಪಡಿಸಿದರು.