ಇಸ್ರೇಲ್ ಕ್ರಮ ವಿರೋಧಿಸಲು ಪ್ರಧಾನಿ ಮೋದಿಗೆ ಧೈರ್ಯವಿಲ್ಲ: ಕಾಂಗ್ರೆಸ್ ಟೀಕೆ
ನವದೆಹಲಿ: ಪಶ್ಚಿಮ ಏಷ್ಯಾ ಯುದ್ಧದ ನೆಪದಲ್ಲಿ ಇಸ್ರೇಲ್ ‘ಗ್ರೇಟರ್ ಇಸ್ರೇಲ್’ ಆಗುವುದಕ್ಕೆ ಪ್ರಯತ್ನಿಸುತ್ತಿದೆ. ಪ್ಯಾಲೆಸ್ಟೀನಿಯನ್ನರನ್ನು ಹತ್ಯೆ ಮಾಡುವ ಮೂಲಕ ವೆಸ್ಟ್ ಬ್ಯಾಂಕ್ ಮೇಲೆ ಇಸ್ರೇಲ್ ಕೈಗೊಳ್ಳುತ್ತಿರುವ ವಸಾಹತು ವಿಸ್ತರಣೆಯ ಬಗ್ಗೆ ಪ್ರಧಾನಿ ಮೋದಿ ಮೌನವಹಿಸಿದ್ದಾರೆ ಎಂದು ಕಾಂಗ್ರೆಸ್ ಟೀಕಿಸಿದೆ. ಇರಾನ್ ಮೇಲೆ ಅಮೆರಿಕ-ಇಸ್ರೇಲ್ ವೈಮಾನಿಕ ದಾಳಿ ಮತ್ತು ಇರಾನ್‌ನ ಪ್ರತಿದಾಳಿ ಪ್ರಾರಂಭವಾಗಿ 28 ದಿನಗಳು ಕಳೆದಿವೆ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ.
‘ಕಳೆದ ನಾಲ್ಕು ವಾರದಲ್ಲಿ ವಿಶ್ವದ ಗಮನ ಹೊರ್ಮುಜ್ ಜಲಸಂಧಿ ಮತ್ತು ಗಲ್ಫ್ ರಾಷ್ಟ್ರಗಳಲ್ಲಿನ ಇಂಧನ ಮೂಲಸೌಕರ್ಯದ ಮೇಲೆ ಕೇಂದ್ರೀಕರಿಸಿದೆ. ಆದರೆ, ಇಸ್ರೇಲ್ ಮಾತ್ರ ಗಾಜಾದ ಜನರ ಮೇಲೆ ತನ್ನ ಕ್ರೂರತೆಯನ್ನು ಮುಂದುವರೆಸಿದೆ.
ದಕ್ಷಿಣ ಲೆಬನಾನ್‌ನಲ್ಲಿ ತನಗಾಗಿ ದೊಡ್ಡ ಬಫರ್ ವಲಯವನ್ನು ರಚಿಸಲು ಕಾರ್ಯಾಚರಣೆ ಪ್ರಾರಂಭಿಸಿದೆ. ವೆಸ್ಟ್ ಬ್ಯಾಂಕ್‌ನಲ್ಲಿ ಅಕ್ರಮವಾಗಿ ವಸಾಹತು ವಿಸ್ತರಣೆಗೆ ನಿರ್ಣಾಯಕ ಕ್ರಮಗಳನ್ನು ತೆಗೆದುಕೊಂಡಿದೆ’ ಎಂದು ರಮೇಶ್ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ಈಚೆಗೆ ಪ್ರಧಾನಿ ಮೋದಿ ಅವರು ಇಸ್ರೇಲ್ ಪ್ರವಾಸ ಕೈಗೊಂಡಿದ್ದರು. ಇಸ್ರೇಲ್‌ನಿಂದ ಭಾರತಕ್ಕೆ ವಾಪಸ್ ಆದ ಎರಡು ದಿನಗಳ ಬಳಿಕ ಇರಾನ್ ಮೇಲೆ ಅಮೆರಿಕ-ಇಸ್ರೇಲ್ ಜಂಟಿ ದಾಳಿ ಆರಂಭಿಸಿತ್ತು. ಮೋದಿ, ಇಸ್ರೇಲ್‌ಗೆ ಭೇಟಿ ನೀಡುವ ಕೆಲವೇ ದಿನಗಳ ಮೊದಲು ಇಸ್ರೇಲ್ ಸಂಸತ್ 1967ರ ನಂತರ ಮೊದಲ ಬಾರಿಗೆ ಆಕ್ರಮಿತ ವೆಸ್ಟ್ ಬ್ಯಾಂಕ್‌ನ ಸರಿಸುಮಾರು ಅರ್ಧದಷ್ಟು ಭೂ ನೋಂದಣಿಗೆ ಅನುಮೋದನೆ ನೀಡಿತ್ತು’ ಎಂದು ರಮೇಶ್ ಉಲ್ಲೇಖಿಸಿದ್ದಾರೆ.