ಕಲಬುರಗಿ: ತೊಗರಿ, ಈರುಳ್ಳಿ ಬೆಳೆಗೆ ‘ಕಸ್ಕೂಟಾ’ ಮಾರಿಯ ಕಾಟ, ಬೆಳೆ ಕಳೆದುಕೊಂಡು ಕಂಗಾಲಾದ ರೈತರು
ಅತಿವೃಷ್ಟಿಯ ಹೊಡೆತದಿಂದ ಚೇತರಿಸಿಕೊಳ್ಳುತ್ತಿದ್ದ ಕಲಬುರಗಿ ಜಿಲ್ಲೆಯ ರೈತರ ಬೆಳೆಗಳಿಗೆ ಈಗ ‘ಕಸ್ಕೂಟಾ’ ಎಂಬ ಪರಾವಲಂಬಿ ರೋಗ ಶಾಪವಾಗಿ ಪರಿಣಮಿಸಿದೆ. ಚಿಂಚೋಳಿ, ಸೇಡಂ ಮತ್ತು ಚಿತ್ತಾಪುರ ಭಾಗದ ಸಾವಿರಾರು ಹೆಕ್ಟೇರ್ ಪ್ರದೇಶದ ತೊಗರಿ ಹಾಗೂ ಈರುಳ್ಳಿ ಬೆಳೆಗಳು ಈ ರೋಗದಿಂದ ನಾಶವಾಗುತ್ತಿವೆ. ವಿದೇಶಿ ಮೂಲದ ಈ ರೋಗಕ್ಕೆ ಸೂಕ್ತ ಮದ್ದಿಲ್ಲದೆ ರೈತರು ಕಂಗಾಲಾಗಿದ್ದು, ಸರ್ಕಾರ ತಕ್ಷಣ ಪರಿಹಾರ ನೀಡುವಂತೆ ಒತ್ತಾಯಿಸುತ್ತಿದ್ದಾರೆ.
ಕಲಬುರಗಿ, ಮಾರ್ಚ್ 30: ಕಲಬುರಗಿ (Kalaburagi) ಜಿಲ್ಲೆಯಲ್ಲಿ ರೈತರು ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮುಂಗಾರು ಹಂಗಾಮಿನಲ್ಲಿ ಅತಿವೃಷ್ಟಿಯಿಂದ ಬೆಳೆ ನಷ್ಟ ಅನುಭವಿಸಿದ್ದ ರೈತರು ಹಿಂಗಾರು ಹಾಗೂ ಬೇಸಿಗೆ ಬೆಳೆಗಳ ಮೂಲಕ ಬದುಕು ಕಟ್ಟಿಕೊಳ್ಳಬೇಕೆಂದು ನಿರೀಕ್ಷೆ ಇಟ್ಟಿದ್ದರು. ಆದರೆ ಇದೀಗ ‘ಕಸ್ಕೂಟಾ’ ಎಂಬ ರೋಗದಿಂದ ಬೆಳೆಗಳು ನಾಶವಾಗುತ್ತಿದ್ದು, ರೈತರು ಕಂಗಾಲಾಗಿದ್ದಾರೆ. ಚಿಂಚೋಳಿ ತಾಲೂಕಿನ ಗಾರಂಪಳ್ಳಿ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಈ ಸಮಸ್ಯೆ ಗಂಭೀರವಾಗಿ ಕಾಣಿಸಿಕೊಂಡಿದೆ. ರೈತರು ತಮ್ಮ ಜಮೀನಿನಲ್ಲಿ ಒಣಗಿ ಹೋಗಿರುವ ತೊಗರಿ ಬೆಳೆಗಳನ್ನು ಹಿಡಿದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ತೊಗರಿ, ಈರುಳ್ಳಿ ಸೇರಿದಂತೆ ಹಲವು ಬೆಳೆಗಳಿಗೆ ಕಸ್ಕೂಟಾ ಎಂಬ ರೋಗ ಆವರಿಸಿ ಬೆಳೆಗಳನ್ನು ಸಂಪೂರ್ಣವಾಗಿ ಹಾಳು ಮಾಡುತ್ತಿದೆ ಎಂದು ರೈತರು ತಿಳಿಸಿದ್ದಾರೆ. ಈ ಭಾಗದ ರೈತರು ಈ ಬಾರಿ ಅತಿಯಾದ ಮಳೆಯಿಂದ ಮುಂಗಾರು ಬೆಳೆಗಳನ್ನು ಕಳೆದುಕೊಂಡಿದ್ದರು. ಸಾಲ ಮಾಡಿ ಬೆಳೆದ ಬೆಳೆ ಹಾಳಾದ ಕಾರಣ, ಸಾಲ ತೀರಿಸಲು ಹಾಗೂ ಕುಟುಂಬದ ಜೀವನ ಸಾಗಿಸಲು ಹಿಂಗಾರು ಮತ್ತು ಬೇಸಿಗೆ ಬೆಳೆಗಳ ಮೇಲೆ ನಿರೀಕ್ಷೆ ಇಟ್ಟಿದ್ದರು. ಆದರೆ ಈಗ ಬೆಳೆಗಳು ಕೈಗೆ ಬರುತ್ತವೆ ಎನ್ನುವಷ್ಟರಲ್ಲಿ ಕಸ್ಕೂಟಾ ರೋಗ ವ್ಯಾಪಕವಾಗಿ ಹರಡಿದ್ದು, ಜಮೀನಿನಲ್ಲಿ ಬೆಳೆದಿರುವ ಬೆಳೆಗಳನ್ನು ನಿಂತಲ್ಲೇ ಒಣಗಿಸುತ್ತಿದೆ.