ಅಸ್ಸಾಂನಲ್ಲಿ ದಶಕದ ಶಾಂತಿ ಪರ್ವ: ಕಾಂಗ್ರೆಸ್‌ನಿಂದ ಕೇವಲ 'ಕಾಗದದ ಒಪ್ಪಂದ'; ಪ್ರಧಾನಿ ಮೋದಿ
ನವದೆಹಲಿ: "ಅಸ್ಸಾಂ ದೀರ್ಘಕಾಲದವರೆಗೆ ಅಸ್ಥಿರತೆ ಮತ್ತು ಹಿಂಸಾಚಾರದ ಜ್ವಾಲೆಯಲ್ಲಿ ಬೆಂದು ಹೋಗಿತ್ತು. ಆದರೆ ಕಳೆದ ಹತ್ತು ವರ್ಷಗಳಲ್ಲಿ ಬಿಜೆಪಿ ನೇತೃತ್ವದ 'ಡಬಲ್ ಇಂಜಿನ್' ಸರ್ಕಾರವು ರಾಜ್ಯದಲ್ಲಿ ಶಾಂತಿ ಮತ್ತು ಅಭಿವೃದ್ಧಿಯ ಹೊಸ ಯುಗವನ್ನು ಆರಂಭಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಹೇಳಿದ್ದಾರೆ.
ಅಸ್ಸಾಂ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ಬೂತ್ ಮಟ್ಟದ ಕಾರ್ಯಕರ್ತರನ್ನು ಉದ್ದೇಶಿಸಿ ಹಮ್ಮಿಕೊಳ್ಳಲಾಗಿದ್ದ 'ಮೇರಾ ಬೂತ್, ಸಬ್ಸೆ ಮಜಬೂತ್' ಸಂವಾದದಲ್ಲಿ ಅವರು ಮಾತನಾಡಿದರು.
ಈಶಾನ್ಯ ರಾಜ್ಯಗಳಲ್ಲಿ ಕಳೆದ ದಶಕದಲ್ಲಿ ವಿವಿಧ ಸಂಘಟನೆಗಳೊಂದಿಗೆ ಒಟ್ಟು 12 ಶಾಂತಿ ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ. ಈ ಮೂಲಕ ಯುವಕರ ಭವಿಷ್ಯವನ್ನು ಭದ್ರಪಡಿಸಲಾಗಿದೆ ಎಂದು ತಿಳಿಸಿದರು.
ಕಾಂಗ್ರೆಸ್ ವಿರುದ್ಧ ಟೀಕಾಪ್ರಹಾರ: ಕಾಂಗ್ರೆಸ್ ಸರ್ಕಾರಗಳು ಕೇವಲ ಸುದ್ದಿಯಾಗಲು ಮತ್ತು ಜನರನ್ನು ದಾರಿ ತಪ್ಪಿಸಲು 'ಕಾಗದದ ಮೇಲೆ' ಒಪ್ಪಂದಗಳನ್ನು ಮಾಡಿಕೊಳ್ಳುತ್ತಿದ್ದವು. ಬೋಡೋ ಸಮುದಾಯದ ಆಕಾಂಕ್ಷೆಗಳಿಗೆ ಕಾಂಗ್ರೆಸ್ ದ್ರೋಹ ಬಗೆದಿದೆ ಎಂದು ಕಿಡಿಕಾರಿದರು. ಮೊದಲ ಬಾರಿಗೆ ಮತದಾನ ಮಾಡುತ್ತಿರುವ ಯುವಕರಿಗೆ ಕಾಂಗ್ರೆಸ್ ಕಾಲದ ಅರಾಜಕತೆಯನ್ನು ನೆನಪಿಸಬೇಕು. ಒಂದು ಸಣ್ಣ ತಪ್ಪು ಮತ್ತೆ ರಾಜ್ಯವನ್ನು ಹಿಂಸಾಚಾರದತ್ತ ತಳ್ಳಬಹುದು ಎಂದು ಕಾರ್ಯಕರ್ತರಿಗೆ ಎಚ್ಚರಿಸಿದರು.
ರಾಜ್ಯದಲ್ಲಿ ಚಲಾವಣೆಯಲ್ಲಿರುವ ಕೃತಕ ಬುದ್ಧಿಮತ್ತೆ (AI) ಆಧಾರಿತ ನಕಲಿ ವಿಡಿಯೋಗಳ ಬಗ್ಗೆ ಸಾರ್ವಜನಿಕರನ್ನು ಜಾಗೃತಗೊಳಿಸುವಂತೆ ಬೂತ್ ಕಾರ್ಯಕರ್ತರಿಗೆ ಪ್ರಧಾನಿ ಕರೆ ನೀಡಿದರು.
ಹ್ಯಾಟ್ರಿಕ್ ಗೆಲುವಿನ ವಿಶ್ವಾಸ
ಅಸ್ಸಾಂನಲ್ಲಿ ಬಿಜೆಪಿ-ಎನ್‌ಡಿಎ ಮೈತ್ರಿಕೂಟವು ಸತತ ಮೂರನೇ ಬಾರಿಗೆ ಅಧಿಕಾರ ಹಿಡಿಯುವ (ಹ್ಯಾಟ್ರಿಕ್) ವಿಶ್ವಾಸವಿದೆ. "ನಾನು ಕೂಡ ನಿಮ್ಮಂತೆ ಒಬ್ಬ ಸಾಮಾನ್ಯ ಕಾರ್ಯಕರ್ತ. ನನ್ನ ಬೂತ್ ಅತ್ಯಂತ ಬಲಶಾಲಿ ಎಂಬ ಸಂಕಲ್ಪದೊಂದಿಗೆ ನಾವೆಲ್ಲರೂ ಕೆಲಸ ಮಾಡೋಣ," ಎಂದು ಮೋದಿ ಹುರಿದುಂಬಿಸಿದರು.
ಅಸ್ಸಾಂನ 126 ಸದಸ್ಯ ಬಲದ ವಿಧಾನಸಭೆಗೆ ಏಪ್ರಿಲ್ 9 ರಂದು ಚುನಾವಣೆ ನಡೆಯಲಿದ್ದು, ಮತ ಎಣಿಕೆ ಮೇ 4 ರಂದು ನಡೆಯಲಿದೆ.