ವಿಶ್ವದ ಪ್ರಸಿದ್ಧ ಏರ್‌ಪೋರ್ಟ್‌ಗೆ ತನ್ನದೇ ಹೆಸರು ಇಟ್ಕೊಂಡ ಡೊನಾಲ್ಡ್ ಟ್ರಂಪ್!
ವಾಷಿಂಗ್ಟನ್: ಭಾರತದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದ ಬಳಿಕ ಯೋಗಿ ಆದಿತ್ಯನಾಥ್ ಕೆಲವು ನಗರಗಳ ಹೆಸರುಗಳನ್ನು ಬದಲಾಯಿಸಿ ದೇಶಾದ್ಯಂತ ಸುದ್ದಿಯಾಗಿದ್ದರು. ಆದಿತ್ಯನಾಥ್ ಈ ನಿರ್ಧಾರ ಪರ ವಿರೋಧ ಚರ್ಚೆಗೂ ಗ್ರಾಸವಾಗಿತ್ತು. ಅದು ಬೇರೆ ವಿಚಾರ.. ಆದರೆ ಈಗ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಕೂಡ ಇಂತಹುದೇ ಹೆಸರು ಬದಲಾವಣೆಯ ನಿರ್ಧಾರಕ್ಕೆ ಮುಂದಾಗಿದ್ದಾರೆ. ಅಮೆರಿಕಾದ ಫ್ಲೋರಿಡಾ ರಾಜ್ಯದ ಪಾಮ್ ಬೀಚ್ ಇಂಟರ್ನ್ಯಾಷನಲ್ ಏರ್‌ಪೋರ್ಟ್‌ಗೆ ಡೊನಾಲ್ಡ್ ಟ್ರಂಪ್ ಹೆಸರಿಡಲು ನಿರ್ಧರಿಸಲಾಗಿದೆ. ಇನ್ನು ಮುಂದೆ ಈ ವಿಮಾನ ನಿಲ್ದಾಣವನ್ನು ಪ್ರೆಸಿಡೆಂಟ್ ಡೊನಾಲ್ಡ್ ಜೆ.
ಟ್ರಂಪ್ ಇಂಟರ್ನ್ಯಾಷನಲ್ ಏರ್‌ಪೋರ್ಟ್ ಎಂದು ಕರೆಯಲಾಗುತ್ತದೆ. ಫ್ಲೋರಿಡಾ ಗವರ್ನರ್ ರಾನ್ ಡಿಸಾಂಟಿಸ್ ಅವರು ಮಾರ್ಚ್ 30, 2026ರ ಸೋಮವಾರ ಈ ಬಿಲ್‌ಗೆ ಸಹಿ ಹಾಕಿ ಅಧಿಕೃತ ಅನುಮೋದನೆ ನೀಡಿದ್ದಾರೆ.
ಈ ಬಗ್ಗೆ ಡೊನಾಲ್ಡ್ ಟ್ರಂಪ್ ಅವರ ಮಗ ಎರಿಕ್ ಟ್ರಂಪ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, ‘ಪಾಮ್ ಬೀಚ್ ಇಂಟರ್ನ್ಯಾಷನಲ್ ಏರ್‌ಪೋರ್ಟ್ ಈಗ ಅಧಿಕೃತವಾಗಿ ‘ಪ್ರೆಸಿಡೆಂಟ್ ಡೊನಾಲ್ಡ್ ಜೆ. ಟ್ರಂಪ್ ಇಂಟರ್ನ್ಯಾಷನಲ್ ಏರ್‌ಪೋರ್ಟ್’ ಆಗಿದೆ. ಇದನ್ನು ಸಾಧ್ಯವಾಗಿಸುವಲ್ಲಿ ನಾನು ಸಣ್ಣ ಪಾತ್ರ ವಹಿಸಿದ್ದಕ್ಕೆ ಬಹಳ ಹೆಮ್ಮೆಯಾಗುತ್ತಿದೆ. ಇದಕ್ಕೆ ಸಹಕರಿಸಿದ ಎಲ್ಲರಿಗೂ ದೊಡ್ಡ ಧನ್ಯವಾದಗಳು’ ಎಂದು ಪೋಸ್ಟ್ ಮಾಡಿದ್ದಾರೆ.