Tamil Nadu Election: ಡಿಎಂಕೆ ಭದ್ರಕೋಟೆಗೆ ನುಗ್ಗುವ ಧೈರ್ಯ ಮಾಡಿದ್ದೇಕೆ ವಿಜಯ್?
ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಮುಖ್ಯಸ್ಥ ಚಂದ್ರಶೇಖರ್ ಜೋಸೆಫ್ ವಿಜಯ್ ಅವರು, ಆಡಳಿತಾರೂಢ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಪಕ್ಷಕ್ಕೆ ಅದರ ಭದ್ರಕೋಟೆ ಚೆನ್ನೈನಲ್ಲೇ ಸವಾಲು ಹಾಕುವ ಧೈರ್ಯ ತೋರಿದ್ದಾರೆ. ಈ ಹಿಂದೆ ಮುಖ್ಯಮಂತ್ರಿಗಳಾಗಿದ್ದ 'ಎಂಜಿಆರ್' ಖ್ಯಾತಿಯ ಎಂ.ಜಿ. ರಾಮಚಂದ್ರನ್ ಮತ್ತು ಜೆ. ಜಯಲಲಿತಾ ಅವರೇ ತಮ್ಮ ರಾಜಕೀಯ ವೃತ್ತಿ ಜೀವನದ ಆರಂಭದಲ್ಲಿ ಇಂತಹ ಸಾಹಸಕ್ಕೆ ಮುಂದಾಗಿರಲಿಲ್ಲ. ವಾಸ್ತವವೆಂದರೆ, ಎಂಜಿಆರ್ ಅವರು ಡಿಎಂಕೆಯಿಂದ ಹೊರಬಂದು ಎಐಡಿಎಂಕೆ ಸ್ಥಾಪಿಸಿದಾಗ ಚೆನ್ನೈ ಹೊರವಲಯದ ಸೇಂಟ್ ಥಾಮಸ್ ಮೌಂಟ್ ಕ್ಷೇತ್ರದಿಂದ ದೂರದ ಅರುಪ್ಪುಕೊಟ್ಟೈಗೆ ಕ್ಷೇತ್ರ ಬದಲಿಸಿಕೊಂಡಿದ್ದರು.
ಅವರ ಉತ್ತರಾಧಿಕಾರಿಯಾಗಿ ಯಶಸ್ಸು ಸಾಧಿಸಿದ ಜಯಲಲಿತಾ ಕೂಡ, ರಾಜಕೀಯದ ಜೀವನದ ಕೊನೇ ಹಂತದಲ್ಲಿ ಚೆನ್ನೈ ಕಡೆ ಬಂದಿದ್ದರು. ರಾಜಧಾನಿಯ ಡಾ. ರಾಧಾಕೃಷ್ಣನ್ ನಗರದಿಂದ 2015ರ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು, ಮರುವರ್ಷವೂ ಅಲ್ಲಿಂದಲೇ ವಿಧಾನಸಭೆ ಪ್ರವೇಶಿಸಿದ್ದರು. ಅದಕ್ಕಿಂತ ಮೊದಲು ಸತತ ಮೂರು ಬಾರಿ ಎಐಎಡಿಎಂಕೆ ಅಭ್ಯರ್ಥಿಗಳು ಈ ಕ್ಷೇತ್ರದಲ್ಲಿ ಡಿಎಂಕೆಯನ್ನು ಮಣಿಸಿದ್ದರು ಎಂಬುದು ಗಮನಿಸಬೇಕಾದ ಸಂಗತಿ.
ಲೆಕ್ಕಾಚಾರವೇನು?
ಡಿಎಂಕೆ ಭದ್ರಕೋಟೆ ಎನಿಸಿರುವ ಚೆನ್ನೈನಲ್ಲಿ ಒಟ್ಟು 16 ವಿಧಾನಸಭಾ ಕ್ಷೇತ್ರಗಳಿವೆ. ಕಳೆದ ಬಾರಿಯ (2021ರ) ಚುನಾವಣೆಯಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಆಡಳಿತಾರೂಢ ಡಿಎಂಕೆ ಹಾಗೂ ಅದರ ಮಿತ್ರಪಕ್ಷ ಕಾಂಗ್ರೆಸ್ ಜಯಭೇರಿ ಭಾರಿಸಿದ್ದವು.
ಅಂದಹಾಗೆ, ಟಿವಿಕೆ ಕಣಕ್ಕಿಳಿಯುತ್ತಿರುವ ಚೊಚ್ಚಲ ಚುನಾವಣೆ ಇದು. ಮೊದಲ ಯತ್ನದಲ್ಲೇ ಆಡಳಿತ ಪಕ್ಷಕ್ಕೆ ಪ್ರಬಲ ಸವಾಲೊಡ್ಡುವ ಹಾಗೂ ಯಾರೂ ತಮ್ಮನ್ನು ಹಿಮ್ಮೆಟ್ಟಿಸಲಾರರು ಎಂಬ ಸಂದೇಶವನ್ನು ವಿಜಯ್ ರವಾನಿಸಿದ್ದಾರೆ.