ರಾಜ್ಯ ಸರ್ಕಾರದ ಪತನ ಈ ಉಪ ಚುನಾವಣೆಯಿಂದಲೇ ಪ್ರಾರಂಭ: ಡಿ.ವಿ.ಸದಾನಂದಗೌಡ ಭವಿಷ್ಯ
ದಾವಣಗೆರೆ: "ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಉಪಚುನಾವಣೆಗಳನ್ನು ನಾವು ಸವಾಲಾಗಿ ಸ್ವೀಕರಿಸಿದ್ದೇವೆ. ಈ ಚುನಾವಣೆಗಳ ಫಲಿತಾಂಶ ರಾಜ್ಯ ಸರ್ಕಾರದ ಪತನಕ್ಕೆ ನಾಂದಿಯಾಗಲಿದೆ," ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಭವಿಷ್ಯ ನುಡಿದಿದ್ದಾರೆ.
ದಾವಣಗೆರೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಕೇವಲ ಒಡೆದ ಮನೆಯಲ್ಲ, ಅದು ಚೂರು ಚೂರಾಗಿದೆ ಎಂದು ಲೇವಡಿ ಮಾಡಿದ ಗೌಡರು, ಈ ಚುನಾವಣೆ 'ಯುನೈಟೆಡ್ ಬಿಜೆಪಿ' ಮತ್ತು 'ಡಿವೈಡೆಡ್ ಕಾಂಗ್ರೆಸ್' ನಡುವಿನ ಹೋರಾಟವಾಗಿದೆ ಎಂದರು. "ಒಂದು ಕಾಲದಲ್ಲಿ ಅಹಿಂದ ಜಪ ಮಾಡುತ್ತಿದ್ದ ಸಿಎಂ ಸಿದ್ದರಾಮಯ್ಯ, ಈಗ ಹಿಂದುಳಿದವರು ಮತ್ತು ಅಲ್ಪಸಂಖ್ಯಾತರನ್ನು ಸಂಪೂರ್ಣವಾಗಿ ಮರೆತಿದ್ದಾರೆ.
ಈ ಉಪಚುನಾವಣೆಯಲ್ಲಿ ಜನರೇ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ," ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕ್ಷೇತ್ರದಲ್ಲಿ ಹಣದ ಪ್ರಭಾವದ ಬಗ್ಗೆ ಮಾತನಾಡಿದ ಅವರು ಇದು ವಂಶಪಾರಂಪರ್ಯವಾಗಿ ಸೂಟ್ ಕೇಸ್ ಹಿಡಿದು ಮತ ಖರೀದಿ ಮಾಡುವವರಿಗೂ ಮತ್ತು ಒಬ್ಬ ಸಾಮಾನ್ಯ ವ್ಯಕ್ತಿಗೂ ನಡೆಯುತ್ತಿರುವ ಯುದ್ಧ. ಹಣದ ದರ್ಪದ ಮೂಲಕ ಗೆಲ್ಲಲು ಕಾಂಗ್ರೆಸ್ ಯತ್ನಿಸುತ್ತಿದೆ, ಆದರೆ ಸಾಮಾನ್ಯ ಕುಟುಂಬದ ಹಿನ್ನೆಲೆಯ ಬಿಜೆಪಿ ಅಭ್ಯರ್ಥಿಯ ಗೆಲುವು ನಿಶ್ಚಿತ ಎಂದು ಹೇಳಿದರು. ಬಿಜೆಪಿ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುತ್ತದೆ ಎಂಬ ಕಾಂಗ್ರೆಸ್ ಅಪಪ್ರಚಾರಕ್ಕೆ ಕಿಡಿಕಾರಿದ ಅವರು.ಬಿಜೆಪಿ ಎಂದಿಗೂ ಬಡವರಿಗೆ ನೀಡುವ ಉಚಿತ ಕೊಡುಗೆಗಳನ್ನು ವಿರೋಧಿಸುವುದಿಲ್ಲ. ಮುಂದೆ ಬಿಜೆಪಿ ಅಧಿಕಾರಕ್ಕೆ ಬಂದಾಗ, ಮಧ್ಯವರ್ತಿಗಳ ಹಾವಳಿಯಿಲ್ಲದೆ ಈ ಸೌಲಭ್ಯಗಳನ್ನು ಜನರಿಗೆ ಇನ್ನಷ್ಟು ಸರಳವಾಗಿ ತಲುಪಿಸುವ ಕೆಲಸ ಮಾಡಲಿದೆ." ಎಂದು ಹೇಳಿದರು.