ಪಶ್ಚಿಮ ಏಷ್ಯಾದಲ್ಲಿರುವ ಅಮೆರಿಕ ಸೌಲಭ್ಯಗಳ ಮೇಲೆ ಇರಾನ್ ದಾಳಿ: ಹೆಚ್ಚಿದ ಭೀತಿ
ಟೆಹರಾನ್: ಇಸ್ರೇಲ್ ಮೇಲೆ ಹಾಗೂ ಪಶ್ಚಿಮ ಏಷ್ಯಾದಾದ್ಯಂತ ಇರುವ ಅಮೆರಿಕಕ್ಕೆ ಸೇರಿದ ಸ್ವತ್ತುಗಳ ಮೇಲೆ ದಾಳಿ ನಡೆಸಿದ್ದಾಗಿ ಇರಾನ್ ಹಾಗೂ ಅದರ ಬೆಂಬಲಿತ ಸಂಘಟನೆಗಳು ಹೇಳಿವೆ. ಆರ್ಥಿಕ ಹಾಗೂ ಕೈಗಾರಿಕಾ ಪ್ರದೇಶಗಳನ್ನೇ ಗುರಿಯಾಗಿಸಿಕೊಂಡು ದಾಳಿಗಳು ನಡೆದಿದ್ದು, ಜಾಗತಿಕ ಇಂಧನ ಪೂರೈಕೆಯಲ್ಲಿ ಉಂಟಾಗಿರುವ ವ್ಯಾಪಕ ಅಡ್ಡಿ ಹೆಚ್ಚಿಸುವ ಆತಂಕ ಎದುರಾಗಿದೆ.
ತನ್ನ ಕೈಗಾರಿಕಾ ಸೌಲಭ್ಯಗಳ ಮೇಲೆ ಇಸ್ರೇಲ್ ಹಾಗೂ ಅಮೆರಿಕದ ದಾಳಿಗೆ ಪ್ರತೀಕಾರವಾಗಿ ಯುಎಇ, ಬಹರೇನ್ ಹಾಗೂ ಇಸ್ರೇಲ್ ಮೇಲೆ ದಾಳಿ ನಡೆಸಲಾಗಿದೆ ಎಂದು ಇರಾನ್ ತಿಳಿಸಿದೆ.
ಅಬುಧಾಬಿಯಲ್ಲಿರುವ ಅಮೆರಿಕದ ಸ್ಟೀಲ್ ಕಾರ್ಖಾನೆಗಳು, ಬಹರೇನ್‌ನಲ್ಲಿರುವ ಅಲ್ಯೂಮಿನಿಯಂ ಕಾರ್ಖಾನೆಗಳು ಹಾಗೂ ಇಸ್ರೇಲ್‌ನ ರಾಫೆಲ್ ಶಸ್ತ್ರಾಸ್ತ್ರ ಕಾರ್ಖಾನೆಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಇರಾನ್ ಮಾಹಿತಿ ನೀಡಿದೆ.
ಇರಾನ್‌ನಿಂದ ಹಾರಿ ಬರುತ್ತಿರುವ ಕ್ಷಿಪಣಿಗಳನ್ನು ತಡೆಯಲು ವಾಯು ರಕ್ಷಣಾ ವ್ಯವಸ್ಥೆಯನ್ನು ಸಕ್ರಿಯಗೊಳಿಸಲಾಗಿದೆ ಎಂದು ಇಸ್ರೇಲ್ ಹೇಳಿದೆ. ಇಸ್ರೇಲ್‌ನಿಂದ ಯಾವುದೇ ಸಾವು ನೋವಿನ ವರದಿಯಾಗಿಲ್ಲ.
ಇದನ್ನೂ ಓದಿ:ಹೊರ್ಮುಜ್ ಜಲಸಂಧಿ ಮೇಲ್ವಿಚಾರಣೆಗೆ ಒಮಾನ್‌ನೊಂದಿಗೆ ಮಾತುಕತೆ: ಇರಾನ್ ಹೇಳಿಕೆ
ಇತ್ತ ಅಮೆರಿಕ ಹಾಗೂ ಇಸ್ರೇಲ್ ಪಡೆಗಳ ದಾಳಿಯಿಂದಾಗಿ ಇಸ್ರೇಲ್ ಎರಡು ದೊಡ್ಡ ಸ್ಟೀಲ್ ಕಾರ್ಖಾನೆಗಳನ್ನು ಅನಿವಾರ್ಯವಾಗಿ ಮುಚ್ಚಬೇಕಾಗಿ ಬಂದಿದೆ ಎಂದು ಕಂಪನಿ ಹೇಳಿದೆ.
ಇನ್ನೊಂದೆಡೆ ಇಸ್ರೇಲ್ ರಾಜಧಾನಿ ಟೆಲ್ ಅವಿವ್ ಗುರಿಯಾಗಿಸಿಕೊಂಡು ಬ್ಯಾಲಿಸ್ಟಿಕ್ ಕ್ಷಿಪಣಿಗಳ ಮೂಲಕ ದಾಳಿ ನಡೆಸಲಾಗಿದೆ ಎಂದು ಹುತಿ ಬಂಡುಕೋರರು ತಿಳಿಸಿದ್ದಾರೆ.
ಇರಾನ್‌ನಲ್ಲಿ ದಾಳಿಗಳು ನಡೆಯುತ್ತಿದ್ದರೂ, ಪರ್ಷಿಯನ್ ಹೊಸ ವರ್ಷದ ಸಂಭ್ರಮಾಚರಣೆಗೆ ಟೆಹರಾನ್‌ನ ಪಾರ್ಕ್‌ಗಳಲ್ಲಿ ಜನ ಸೇರಿದ್ದರು. ಸಾಮಾನ್ಯವಾಗಿ ಈ ಸಮಯದಲ್ಲಿ ಇರಾನಿಗಳು ಪ್ರವಾಸ ಮಾಡುತ್ತಾರೆ. ರಾಜಧಾನಿಗೆ ಪ್ರವೇಶ ಮಾಡುವಲ್ಲಿ ರೆವಲ್ಯೂಷನರಿ ಗಾರ್ಡ್ಸ್ ಪಡೆಗಳು ಚೆಕ್ ಪಾಯಿಂಟ್‌ಗಳನ್ನು ಹೆಚ್ಚಿಸಿದ್ದು, ಕಟ್ಟುನಿಟ್ಟಿನ ತಪಾಸಣೆ ನಡೆಸುತ್ತಿವೆ ಎಂದು ನಾಗರಿಕರೊಬ್ಬರು ತಿಳಿಸಿದ್ದಾರೆ.