ಭಾರತದ ಪಾಲಾಗಲಿದೆ ಪಾಕ್ ಆಕ್ರಮಿತ ಕಾಶ್ಮೀರ? ಅಖಿಲ ಭಾರತ ಇಮಾಮ್ ಸಂಘಟನೆಯ ಮುಖ್ಯಸ್ಥರ ಭವಿಷ್ಯ
ಶ್ರೀನಗರ: "ಪಾಕಿಸ್ತಾನ ಆಕ್ರಮಿತ ಕಾಶ್ಮೀರವು (PoK) ಭಾರತದ ಅವಿಭಾಜ್ಯ ಅಂಗವಾಗಿದೆ. ಅಲ್ಲಿನ ಜನರೇ ಈಗ ಭಾರತದೊಂದಿಗೆ ಮರುಜೋಡಣೆಯಾಗಲು ಬಯಸುತ್ತಿದ್ದು, ಅತಿ ಶೀಘ್ರದಲ್ಲೇ ಪಿಒಕೆ ಭಾರತದ ಪಾಲಾಗಲಿದೆ" ಎಂದು ಅಖಿಲ ಭಾರತ ಇಮಾಮ್ ಸಂಘಟನೆಯ ಮುಖ್ಯಸ್ಥ ಉಮರ್ ಅಹ್ಮದ್ ಇಲ್ಯಾಸಿ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ಕಾಶ್ಮೀರ ಪ್ರವಾಸದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಡಿ ಆಚೆಗಿನ ಬೆಳವಣಿಗೆಗಳ ಕುರಿತು ಮಹತ್ವದ ಹೇಳಿಕೆ ನೀಡಿದರು.
ನೆರೆಯ ದೇಶಕ್ಕೆ ನಾನು ಒಂದು ಮಾತನ್ನು ಸ್ಪಷ್ಟಪಡಿಸಲು ಬಯಸುತ್ತೇನೆ. ಪಿಒಕೆ ಜನರು ಭಾರತದ ಅಭಿವೃದ್ಧಿಯನ್ನು ಕಂಡು ಬೆರಗಾಗಿದ್ದಾರೆ.
ಅಲ್ಲಿನ ನಾಗರಿಕರು ಈಗ ಜನಮತಗಣನೆಗಾಗಿ ಕಾಯುತ್ತಿದ್ದಾರೆ. ಜಮ್ಮು-ಕಾಶ್ಮೀರದಲ್ಲಿ ನಡೆಯುತ್ತಿರುವ ಅಭಿವೃದ್ಧಿಯನ್ನು ಕಂಡು ಅವರು ಭಾರತದೊಂದಿಗೆ ಸೇರಲು ಉತ್ಸುಕರಾಗಿದ್ದಾರೆ ಎಂದು ಇಲ್ಯಾಸಿ ತಿಳಿಸಿದರು.
ಬದಲಾದ ಕಾಶ್ಮೀರ: 370ನೇ ವಿಧಿ ರದ್ದತಿಯ ನಂತರ ಕಾಶ್ಮೀರವು ಹೊಸ ರೂಪ ಪಡೆದಿದೆ. ಹಿಂದೆ ಕಲ್ಲು ತೂರಾಟ ನಡೆಸುತ್ತಿದ್ದ ಯುವಕರ ಕೈಯಲ್ಲಿ ಇಂದು ಪೆನ್ನು ಮತ್ತು ಪುಸ್ತಕಗಳಿವೆ. ಶಿಕ್ಷಣ ಮತ್ತು ಪ್ರವಾಸೋದ್ಯಮದಲ್ಲಿ ಕಣಿವೆ ರಾಜ್ಯ ಪ್ರಗತಿ ಸಾಧಿಸುತ್ತಿದೆ ಎಂದು ಅವರು ಶ್ಲಾಘಿಸಿದರು. ಭಯಬೇಡ, ಕಾಶ್ಮೀರಕ್ಕೆ ಭೇಟಿ ನೀಡಿ
ಕಳೆದ ವರ್ಷ ಪಹಲ್ಗಾಮ್‌ನ ಬೈಸರಣ್‌ನಲ್ಲಿ ನಡೆದ ಭಯೋತ್ಪಾದನಾ ದಾಳಿಯ ನಂತರ ಪ್ರವಾಸೋದ್ಯಮದ ಮೇಲೆ ಕೊಂಚ ಪರಿಣಾಮ ಬೀರಿದ್ದನ್ನು ಉಲ್ಲೇಖಿಸಿದ ಅವರು,.
ಈಗ ಕಾಶ್ಮೀರದಲ್ಲಿ ಭಯದ ವಾತಾವರಣವಿಲ್ಲ. ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಭೇಟಿ ನೀಡಬೇಕು ಎಂದು ಮನವಿ ಮಾಡಿದರು.
ಜಾಗತಿಕ ಶಾಂತಿಗೆ ಮೋದಿಯವರೇ ಆಶಾಕಿರಣ
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದ ಕುರಿತು ಮಾತನಾಡಿದ ಅವರು, ಯುದ್ಧವು ಕೇವಲ ವಿನಾಶವನ್ನು ತರುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು. "ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ನನಗೆ ಅಪಾರ ಭರವಸೆ ಇದೆ. ಅವರು ಮಧ್ಯಸ್ಥಿಕೆ ವಹಿಸುವ ಮೂಲಕ ಯುದ್ಧವನ್ನು ಕೊನೆಗಾಣಿಸಿ ಶಾಂತಿ ನೆಲೆಸುವಂತೆ ಮಾಡುತ್ತಾರೆ ಎಂಬ ನಂಬಿಕೆ ನನಗಿದೆ, ಎಂದು ಅವರು ಹೇಳಿದರು.