ಪಶ್ಚಿಮ ಏಷ್ಯಾ ಬಿಕ್ಕಟ್ಟು: ವಿದೇಶಾಂಗ ಕಾರ್ಯದರ್ಶಿ ಮಿಸ್ರಿ ವಾಷಿಂಗ್ಟನ್ ಭೇಟಿ
ನವದೆಹಲಿ: ದ್ವಿಪಕ್ಷೀಯ ವ್ಯಾಪಾರ ಮತ್ತು ರಕ್ಷಣಾ ಸಂಬಂಧಗಳನ್ನು ಪರಾಮರ್ಶಿಸಲು ಹಾಗೂ ಪಶ್ಚಿಮ ಏಷ್ಯಾದಲ್ಲಿ ಉಲ್ಬಣಗೊಂಡಿರುವ ಬಿಕ್ಕಟ್ಟಿನ ಬಗ್ಗೆ ಚರ್ಚಿಸಲು ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅವರು ಅಮೆರಿಕದ ವಾಷಿಂಗ್ಟನ್ ಡಿಸಿಗೆ ಮೂರು ದಿನಗಳ ಭೇಟಿಯನ್ನು ಬುಧವಾರದಿಂದ ಪ್ರಾರಂಭಿಸಲಿದ್ದಾರೆ. ‘ಏಪ್ರಿಲ್ 8ರಿಂದ 10ರವರೆಗಿನ ಮಿಸ್ರಿ ಅವರ ಭೇಟಿಯು ಭಾರತ ಮತ್ತು ಅಮೆರಿಕ ನಡುವಿನ ದ್ವಿಪಕ್ಷೀಯ ಸಂಬಂಧಗಳ ಸ್ವರೂಪವನ್ನು ಮರುಪರಿಶೀಲಿಸಲು, ಪ್ರಮುಖ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಸಹಕಾರವನ್ನು ಮತ್ತಷ್ಟು ವೃದ್ಧಿಸಲು ಅವಕಾಶ ಕಲ್ಪಿಸಲಿದೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ಅಮೆರಿಕವು ಭಾರತದ ಮೇಲೆ ಪ್ರತಿಸುಂಕ ವಿಧಿಸಿದ ನಂತರ ಮತ್ತು ಕಳೆದ ವರ್ಷದ ಮೇ ತಿಂಗಳಿನಲ್ಲಿ ಭಾರತ–ಪಾಕಿಸ್ತಾನ ಸೇನಾ ಘರ್ಷಣೆಯನ್ನು ತಗ್ಗಿಸುವಲ್ಲಿ ಅಮೆರಿಕದ ಪಾತ್ರದ ಬಗ್ಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ ನಂತರ ಉಭಯ ದೇಶಗಳ ನಡುವಿನ ಸಂಬಂಧಗಳು ಹದಗೆಟ್ಟಿದ್ದವು.
ಮಿಸ್ರಿ ಅವರ ಪ್ರವಾಸದ ಸಮಯದಲ್ಲಿ ಪ್ರಸ್ತಾವಿತ ದ್ವಿಪಕ್ಷೀಯ ವ್ಯಾಪಾರ ಒಪ್ಪಂದವನ್ನು ಮುಂದುವರಿಸುವ ಬಗ್ಗೆ ಎರಡೂ ಕಡೆಯವರು ಚರ್ಚಿಸುವ ಸಾಧ್ಯತೆಯಿದೆ.