ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ವಿರುದ್ಧ ಪಿಣರಾಯಿ ವಾಗ್ದಾಳಿ
ಕಣ್ಣೂರು: ತೆಲಂಗಾಣ ಮುಖ್ಯಮಂತ್ರಿ ರೇವಂತ ರೆಡ್ಡಿ ಅವರ ವಿರುದ್ಧ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಮಂಗಳವಾರ ವಾಗ್ದಾಳಿ ನಡೆಸಿದರು. ರೇವಂತ ರೆಡ್ಡಿ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಪಿಣರಾಯಿ ಅವರು, ‘ಮುಖ್ಯಮಂತ್ರಿ ಅವರಿಗೆ ಮೂಲತಃ ಸನ್ನಡತೆ ಇರಬೇಕು. ಆನಂತರ ಅದು ಪಾಲನೆಯಾಗುತ್ತಿದೆಯೇ ಎಂದು ಪ್ರಶ್ನಿಸಬೇಕು’ ಎಂದು ಹೇಳಿದರು. ಬಳಿಕ ‘ಸರಿಯಾದ ಸಮಯದಲ್ಲಿ ಪ್ರತಿಕ್ರಿಯೆ ನೀಡುತ್ತೇನೆ’ ಎಂದೂ ಹೇಳಿದರು.
‘ತೆಲಂಗಾಣ ಮುಖ್ಯಮಂತ್ರಿ ಅವರಿಗೆ ತಪ್ಪಾದ ಮಾಹಿತಿ ಲಭ್ಯವಾಗಿದೆ.
ಅವರು ತಮ್ಮ ರಾಜ್ಯದ ದೌರ್ಬಲ್ಯವನ್ನು ಮರೆಮಾಚುವ ಪ್ರಯತ್ನದಲ್ಲಿ ಕೇರಳ ಮತ್ತು ಅದರ ಜನರನ್ನು ಅಣಕ ಮಾಡಿದ್ದಾರೆ’ ಎಂದು ಆರೋಪಿಸಿದರು.
ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರೇವಂತ್ ರೆಡ್ಡಿ ಅವರನ್ನು ಉಲ್ಲೇಖಿಸಿ ಮಲಯಾಳ ಭಾಷೆಯಲ್ಲಿ ಕೆಟ್ಟ ಪದವನ್ನು ಬಳಕೆ ಮಾಡಿದರು.
ಏಪ್ರಿಲ್ 1ರಂದು ತಿರುವನಂತಪುರನಲ್ಲಿ ನಡೆದ ಯುಡಿಎಫ್ ಚುನಾವಣಾ ರ‍್ಯಾಲಿ ವೇಳೆ ರೇವಂತ್ ಅವರು, ‘ನೀ ಪೊ ಮೋನೆ ವಿಜಯ್’ (ನೀನು ಹೋಗು ಮಗನೇ) ಎಂದು ಮಲಯಾಳದ ‘ನರಸಿಂಹ’ ಸಿನಿಮಾದ ಸಂಭಾಷಣೆಯನ್ನು ಉಲ್ಲೇಖಿಸಿ ಹೇಳಿದ್ದರು.
ಬಳಿಕ, ‘ವಿಜಯನ್ ಅವರ ಸಮಯ ಮುಗಿದಿದೆ. ಯುಡಿಎಫ್ ಸಮಯ ಆರಂಭವಾಗಿದೆ’ ಎಂದೂ ಹೇಳಿದ್ದರು.