ಮಹಿಳೆಯರಿಗೆ ಉಚಿತ ಬಸ್, ₹ 3000 ನೆರವು: ಬಂಗಾಳದಲ್ಲಿ ಬಿಜೆಪಿಯಿಂದ ಕರ್ನಾಟಕ ಮಾದರಿ
ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ಅಧಿಕಾರಕ್ಕೆ ಬಂದರೆ ಒಳ ನುಸುಳುವಿಕೆ ವಿರುದ್ಧ ಕಠಿಣ ನಿಲುವು, ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ, ಪ್ರತಿಯೊಬ್ಬ ಮಹಿಳೆ ಮತ್ತು ನಿರುದ್ಯೋಗಿಗಳಿಗೆ (ಯುವಜನತೆ) ಮಾಸಿಕ ₹3,000 ಆರ್ಥಿಕ ನೆರವು ಹಾಗೂ ರಾಜ್ಯ ಸರ್ಕಾರಿ ನೌಕರರಿಗಾಗಿ 45 ದಿನಗಳೊಳಗೆ 7ನೇ ವೇತನ ಆಯೋಗವನ್ನು ಜಾರಿಗೆ ತರುವುದಾಗಿ ಬಿಜೆಪಿ ಶುಕ್ರವಾರ ಭರವಸೆ ನೀಡಿದೆ.
ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಹಿನ್ನೆಲೆ ಬಿಜೆಪಿಯ ಪ್ರಣಾಳಿಕೆ 'ಸಂಕಲ್ಪ ಪತ್ರ'ವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಬಿಡುಗಡೆ ಮಾಡಿದ್ದು, ಈ ಪ್ರಣಾಳಿಕೆ 'ಸೋನಾರ್ ಬಾಂಗ್ಲಾ' ನಿರ್ಮಾಣದ ಮಾರ್ಗಸೂಚಿ ಎಂದು ಬಣ್ಣಿಸಿದ್ದಾರೆ.
ಇದೇ ವೇಳೆ ಮಮತಾ ಬ್ಯಾನರ್ಜಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, ಕಳೆದ 15 ವರ್ಷಗಳ ತೃಣಮೂಲ ಕಾಂಗ್ರೆಸ್‌ನ ಆಡಳಿತವು ರಾಜ್ಯದ ಜನರಿಗೆ ಒಂದು ದುಸ್ವಪ್ನವಾಗಿತ್ತು ಎಂದು ಟೀಕಿಸಿದ್ದಾರೆ.
ಬಿಜೆಪಿ ಸಂಕಲ್ಪ ಪತ್ರವು ರೈತರು, ಯುವಕರು ಮತ್ತು ಮಹಿಳೆಯರಿಗೆ ಪೂರಕವಾಗಿದೆ. ಬಂಗಾಳದ ಸಂಸ್ಕೃತಿಯ ಬಗ್ಗೆ ಹೆಮ್ಮೆ ಪಡುವ ಪ್ರತಿಯೊಬ್ಬ ನಾಗರಿಕನಿಗೂ ಇದು ಹೊಸ ಭರವಸೆಯನ್ನು ಒದಗಿಸುತ್ತದೆ. ಅಲ್ಲದೇ ಸೋನಾರ್ ಬಾಂಗ್ಲಾ ನಿರ್ಮಾಣಕ್ಕೆ ಮಾರ್ಗಸೂಚಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಅಮಿತ್ ಶಾ ಹೇಳಿದ್ದಾರೆ.