ಪತ್ನಿಯನ್ನ ಅಡುಗೆ ಮನೆಗೆ ಸೇರಿಸದಿದ್ದರೆ ಅದು 'ಮಾನಸಿಕ ಕ್ರೌರ್ಯ': ಪತಿ ವಿರುದ್ಧದ FIR ರದ್ದುಗೊಳಿಸಲು ಹೈಕೋರ್ಟ್ ನಿರಾಕರಣೆ
ನಾಗ್ಪುರ (ಏ.13): ವಿವಾಹಿತ ಮಹಿಳೆಯನ್ನು ಆಕೆಯ ಗಂಡನ ಮನೆಯ ಅಡುಗೆ ಮನೆಗೆ ಪ್ರವೇಶಿಸದಂತೆ ತಡೆಯುವುದು ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 498A ಅಡಿಯಲ್ಲಿ 'ಮಾನಸಿಕ ಕ್ರೌರ್ಯ'ಕ್ಕೆ ಸಮಾನವಾಗಿರುತ್ತದೆ ಎಂದು ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠವು ಮಹತ್ವದ ತೀರ್ಪು ನೀಡಿದೆ. ಈ ಹಿನ್ನೆಲೆಯಲ್ಲಿ ಪತಿ ಸಲ್ಲಿಸಿದ್ದ ಎಫ್‌ಐಆರ್ (FIR) ರದ್ದು ಕೋರುವ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ನ್ಯಾಯಮೂರ್ತಿ ಊರ್ಮಿಳಾ ಜೋಶಿ-ಫಾಲ್ಕೆ ಅವರಿದ್ದ ಪೀಠವು ಈ ಆದೇಶವನ್ನು ಹೊರಡಿಸಿದೆ. "ಪತ್ನಿಯು ಅಡುಗೆ ಮನೆಗೆ ಪ್ರವೇಶಿಸದಂತೆ ತಡೆದು, ಆಕೆಯನ್ನು ಹೊರಗಿನಿಂದ ಆಹಾರ ತರುವಂತೆ ಕೇಳುವುದು ಮಾನಸಿಕ ಕ್ರೌರ್ಯ ಎಂದು ಪರಿಗಣಿಸಲು ಸಾಕು" ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ನಾಗ್ಪುರ ಮೂಲದ ಪತಿಯ ವಿರುದ್ಧದ ಆರೋಪಗಳಲ್ಲಿ ಮೇಲ್ನೋಟಕ್ಕೆ ಕ್ರೌರ್ಯ ಎಸಗಿರುವ ಅಂಶಗಳು ಕಂಡುಬಂದಿವೆ ಎಂದು ಪೀಠವು ಹೇಳಿದೆ.
ಪ್ರಕರಣದ ಹಿನ್ನೆಲೆ
ಅಕೋಲಾದ ಮಹಿಳೆಯೊಬ್ಬರು ತನ್ನ ಪತಿ ಮತ್ತು ಅತ್ತೆಯ ವಿರುದ್ಧ ದೂರು ದಾಖಲಿಸಿದ್ದರು. 2022ರ ನವೆಂಬರ್ 29 ವಿವಾಹವಾದ ನಂತರ, ಪತಿ ಪದೇ ಪದೇ ಜಗಳವಾಡುತ್ತಿದ್ದ. ಆಕೆಯ ಓಡಾಟದ ಮೇಲೆ ನಿರ್ಬಂಧ ಹೇರಿದ್ದಲ್ಲದೆ, ತವರು ಮನೆಗೆ ಭೇಟಿ ನೀಡದಂತೆ ತಡೆಯುತ್ತಿದ್ದ. ಅಡುಗೆ ಮಾಡಲು ಅವಕಾಶ ನೀಡುತ್ತಿರಲಿಲ್ಲ. ಪತ್ನಿಯನ್ನ ಅಡುಗೆ ಮನೆಗೆ ಸೇರಿಸದೆ ಹೊರಗಿನಿಂದಲೇ ಊಟ ತರಿಸಿಕೊಳ್ಳುವಂತೆ ಒತ್ತಾಯಿಸುತ್ತಿದ್ದ. ಅವಮಾನಿಸುವ ಉದ್ದೇಶದಿಂದ ಆಕೆಯ ವಸ್ತುಗಳನ್ನು ಮನೆಯಿಂದ ಹೊರಗೆ ಎಸೆಯಲಾಗಿತ್ತು ಮತ್ತು ವಿಚ್ಛೇದನ ಪಡೆಯುವಂತೆ ಒತ್ತಡ ಹೇರಲಾಗಿತ್ತು.
ಅತ್ತೆಗೆ ರಿಲೀಫ್, ಪತಿಗೆ ಸಂಕಷ್ಟ
ಪತಿ ತನ್ನ ವಿರುದ್ಧದ 2024ರ ಎಫ್‌ಐಆರ್ ಅನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಿದ್ದ. ತಾನು ನೀಡಿದ್ದ ವಿಚ್ಛೇದನ ಅರ್ಜಿಗೆ ಪತ್ನಿ ಪ್ರತಿಕ್ರಿಯೆಯಾಗಿ ಈ ಸುಳ್ಳು ದೂರು ನೀಡಿದ್ದಾಳೆ ಎಂದು ವಾದಿಸಿದ್ದ. ಆದರೆ ಪ್ರಾಸಿಕ್ಯೂಷನ್ ಈ ವಾದವನ್ನು ವಿರೋಧಿಸಿ, ಇದು ಸ್ಪಷ್ಟವಾದ ಮಾನಸಿಕ ಹಿಂಸೆಯ ಪ್ರಕರಣ ಎಂದು ವಾದಿಸಿತು.