ನಮ್ಮ ಮೇಲೆ ದಾಳಿ ಮಾಡಿದರೆ ಸುಮ್ಮನಿರಲ್ಲ: ಅಮೆರಿಕಕ್ಕೆ ಕ್ಯೂಬಾ ಅಧ್ಯಕ್ಷರ ಖಡಕ್ ಎಚ್ಚರಿಕೆ
ಸ್ಯಾನ್ ಜುವಾನ್ (ಪೋರ್ಟೊ ರಿಕೊ): ಕ್ಯೂಬಾ ಮೇಲೆ ಮಿಲಿಟರಿ ದಾಳಿ ನಡೆಸಲು ಅಥವಾ ನನ್ನನ್ನು ಅಧಿಕಾರದಿಂದ ಕೆಳಗಿಳಿಸಲು ಅಮೆರಿಕಕ್ಕೆ ಯಾವುದೇ ಸಮರ್ಥನೀಯ ಕಾರಣಗಳಿಲ್ಲ ಎಂದು ಕ್ಯೂಬಾ ಅಧ್ಯಕ್ಷ ಮಿಗುಯೆಲ್ ಡಿಯಾಜ್ ಕೆನೆಲ್ ಎಚ್ಚರಿಸಿದ್ದಾರೆ.
ಎನ್‌ಬಿಸಿ ನ್ಯೂಸ್‌ನ 'ಮೀಟ್ ದಿ ಪ್ರೆಸ್' ಕಾರ್ಯಕ್ರಮಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಅಮೆರಿಕದ ಯಾವುದೇ ದುಸ್ಸಾಹಸವು ಇಡೀ ಪ್ರದೇಶದ ಭದ್ರತೆಯ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ತಿಳಿಸಿದ್ದಾರೆ.
ಪ್ರಾಣತ್ಯಾಗಕ್ಕೂ ಸಿದ್ಧ: "ಒಂದು ವೇಳೆ ಅಮೆರಿಕವು ಕ್ಯೂಬಾ ಮೇಲೆ ಸೇನಾ ಆಕ್ರಮಣ ಮಾಡಿದರೆ ಅಥವಾ ಅಧ್ಯಕ್ಷರ ಅಪಹರಣದಂತಹ ಕೃತ್ಯಕ್ಕೆ ಮುಂದಾದರೆ, ನಾವು ಪ್ರಾಣ ಪಣಕ್ಕಿಟ್ಟು ಹೋರಾಡುತ್ತೇವೆ. ನಮ್ಮ ರಾಷ್ಟ್ರಗೀತೆ ಹೇಳುವಂತೆ 'ತಾಯ್ನಾಡಿಗಾಗಿ ಸಾಯುವುದು ಎಂದರೆ ಬದುಕಿದಂತೆ'" ಎಂದು ಡಿಯಾಜ್ ಕೆನೆಲ್ ಭಾವನಾತ್ಮಕವಾಗಿ ನುಡಿದರು.
ಶರತ್ತು ರಹಿತ ಮಾತುಕತೆಗೆ ಸಿದ್ಧ: ಕ್ಯೂಬಾದ ರಾಜಕೀಯ ವ್ಯವಸ್ಥೆಯಲ್ಲಿ ಬದಲಾವಣೆ ಬಯಸದಿದ್ದಲ್ಲಿ ಮಾತ್ರ ನಾವು ಅಮೆರಿಕದೊಂದಿಗೆ ಯಾವುದೇ ವಿಷಯದ ಬಗ್ಗೆ ಮುಕ್ತವಾಗಿ ಚರ್ಚಿಸಲು ಸಿದ್ಧ ಎಂದು ಅವರು ಸ್ಪಷ್ಟಪಡಿಸಿದರು.
ಕ್ಯೂಬಾದ ಇಂದಿನ ಆರ್ಥಿಕ ಸಂಕಷ್ಟ ಮತ್ತು ಆರೋಗ್ಯ ವ್ಯವಸ್ಥೆಯ ಕುಸಿತಕ್ಕೆ ಅಮೆರಿಕ ಹೇರಿರುವ ಇಂಧನ ದಿಗ್ಬಂಧನವೇ ಕಾರಣ ಎಂದು ಅವರು ದೂರಿದ್ದಾರೆ.
ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಅಮೆರಿಕ ಬಂಧಿಸಿದ ಬಳಿಕ ಕ್ಯೂಬಾಕ್ಕೆ ಬರುತ್ತಿದ್ದ ತೈಲ ಪೂರೈಕೆ ಸ್ಥಗಿತಗೊಂಡಿತ್ತು. ಮಾರ್ಚ್ ತಿಂಗಳಿನಲ್ಲಿ ರಷ್ಯಾದಿಂದ ಬಂದ 7.30 ಲಕ್ಷ ಬ್ಯಾರೆಲ್ ಕಚ್ಚಾ ತೈಲವು ಕ್ಯೂಬಾದ ಮೂರು ತಿಂಗಳ ಇಂಧನ ಕ್ಷಾಮವನ್ನು ನೀಗಿಸಿದೆ. ರಷ್ಯಾ ಮತ್ತೊಂದು ತೈಲ ಟ್ಯಾಂಕರ್ ಕಳುಹಿಸುವ ಭರವಸೆ ನೀಡಿದೆ.
ಟ್ರಂಪ್ ಹೇಳಿಕೆಗೆ ಪ್ರತಿಕ್ರಿಯೆ
ಕ್ಯೂಬಾ ಕಥೆ ಮುಗಿಯಿತು, ಅಲ್ಲಿನ ಭ್ರಷ್ಟ ನಾಯಕತ್ವದಿಂದಾಗಿ ಒಂದು ಟ್ಯಾಂಕರ್ ತೈಲ ಬಂದರೂ ಏನೂ ಬದಲಾಗುವುದಿಲ್ಲ" ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಯನ್ನು ಡಿಯಾಜ್-ಕಾನೆಲ್ ಗಂಭೀರವಾಗಿ ಪರಿಗಣಿಸಿದ್ದಾರೆ. "ಟ್ರಂಪ್ ಮಾತುಗಳನ್ನು ನಾವು ಎಚ್ಚರಿಕೆಯೆಂದು ಭಾವಿಸಿದ್ದೇವೆ. ನಮ್ಮ ದೇಶ ಮತ್ತು ಜನರನ್ನು ರಕ್ಷಿಸಿಕೊಳ್ಳುವುದು ನಮ್ಮ ಜವಾಬ್ದಾರಿ" ಎಂದು ಅವರು ತಿರುಗೇಟು ನೀಡಿದ್ದಾರೆ.
ಈ ಬೆಳವಣಿಗೆಯಿಂದಾಗಿ ಕೆರಿಬಿಯನ್ ದ್ವೀಪ ರಾಷ್ಟ್ರ ಕ್ಯೂಬಾ ಮತ್ತು ಅಮೆರಿಕ ನಡುವಿನ ಶೀತಲ ಸಮರವು ಹೊಸ ತಿರುವು ಪಡೆದಿದೆ.