Karwar: ಮಧ್ಯಪ್ರಾಚ್ಯದಲ್ಲಿ ಯುದ್ಧದ ಎಫೆಕ್ಟ್; ಕಾರವಾರ ಬಂದರಿನಲ್ಲಿ ಲಾಕ್‌ಡೌನ್ ಸ್ಥಿತಿ, ಕೋಟ್ಯಂತರ ರೂ. ನಷ್ಟ!
ಕಾರವಾರ: ಕೊಲ್ಲಿ ರಾಷ್ಟ್ರಗಳಲ್ಲಿ (Iran Israel War) ನಡೆಯುತ್ತಿರುವ ಯುದ್ಧ ಸಂಘರ್ಷ ದೇಶಾದ್ಯಂತ ಹಲವಾರು ಸಮಸ್ಯೆಗಳನ್ನು ಉಂಟು ಮಾಡಿದೆ. ಒಂದೆಡೆ ಗ್ಯಾಸ್ ಸಮಸ್ಯೆ (LPG Crisis) ತಲೆದೂರಿದ್ದು, ಹೋಟೆಲ್‌ಗಳು, ಆಟೋ ಚಾಲಕರು (Auto Drivers) ಸಮರ್ಪಕ ಗ್ಯಾಸ್ ಸಿಗದೆ ಏಜೆನ್ಸಿಗಳ ಮುಂದೆ ಕ್ಯೂ ನಿಲ್ಲುವ ಸ್ಥಿತಿ ನಿರ್ಮಾಣವಾಗಿದೆ. ಆಟೋ ಚಾಲಕರು ದಿನನಿತ್ಯ ಗ್ಯಾಸ್ ಏಜೆನ್ಸಿಗಳ ಮುಂದೆ ಸಾಲುಗಟ್ಟಿ ನಿಂತಿದ್ದು, ಕೆಲಸವಿಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇನ್ನೊಂದೆಡೆ ಇದೀಗ ವಹಿವಾಟಿಲ್ಲದೆ ಕಚ್ಚಾ ಡಾಂಬರು ಕೊಂಡೊಯ್ಯುವ ಟ್ಯಾಂಕರ್‌ಗಳು (Lorry Tankers) ನಿಂತಿದ್ದು, ಅಪಾರ ನಷ್ಟ ಉಂಟಾಗುವಂತೆ ಮಾಡಿದೆ.
ವಹಿವಾಟಿಲ್ಲದೆ ಕಚ್ಚಾ ಡಾಂಬರು ಕೊಂಡೊಯ್ಯುವ ಟ್ಯಾಂಕರ್‌ಗಳು ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಬಂದರಿನಲ್ಲಿ ಖಾಲಿ ನಿಂತಿದ್ದು, ಲಾಕ್‌ಡೌನ್ ಪರಿಸ್ಥಿತಿ ನಿರ್ಮಾಣವಾಗಿದೆ. 2025-26ನೇ ಸಾಲಿನಲ್ಲಿ ವಾಣಿಜ್ಯ ಬಂದರು ಬಳಸಿಕೊಂಡು ಖಾಸಗಿ ಸರಕು ಸಾಗಣೆ ಕಂಪನಿಗಳು ನಡೆದಿದ ವಹಿವಾಟಿನಿಂದ ಕರ್ನಾಟಕ ಜಲಸಾರಿಗೆ ಮಂಡಳಿಗೆ 11,04,40,491 ಆದಾಯ ಗಳಿಕೆಯಾಗಿದೆ. ಆದರೆ ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಆದಾಯ, ಬಂದರಿಗೆ ಬಂದ ಹಡಗುಗಳ ಪ್ರಮಾಣ ಇಳಿಕೆಯಾಗಿದೆ.
2026 ಜನವರಿಯಿಂದ ಈವರೆಗೆ 5 ಹಡಗುಗಳು ಮಾತ್ರ ಆಗಮಿಸಿದ್ದು 1 ಕೋಟಿವರೆಗೆ ನಷ್ಟ ಉಂಟಾಗಿದೆ. ಯುದ್ಧ ಆರಂಭವಾದ ಬಳಿಕ ಮಾರ್ಚ್ 13 ರಂದು ಬಿಟುಮಿನ್ ತುಂಬಿಕೊಂಡು ಒಂದು ಹಡಗು ಮಾತ್ರ ಬಂದಿದೆ. ಈ ಹಿನ್ನಲೆಯಲ್ಲಿ ಕಾರವಾರ ವಾಣಿಜ್ಯ ಬಂದರು ಸಂಪೂರ್ಣ ನಷ್ಟದತ್ತ ಸಾಗುತ್ತಿದೆ. ಮಾರ್ಚ್ ನಲ್ಲಿ ನಮಗೆ 10-12 ಹಡಗುಗಳು ನಮ್ಮ ಬಂದರಿಗೆ ಬರಬೇಕಿತ್ತು. ಆದರೆ ಈ ಬಾರಿ ಕೇವಲ 5 ಹಡಗು ಮಾತ್ರ ಬಂದಿದೆ. ದೇಶದಲ್ಲಿ ಗ್ಯಾಸ್ ಸಮಸ್ಯೆಯೂ ಹೆಚ್ಚಾಗಿದ್ದು, ಆದರೆ ನಾವು ಅದನ್ನು ಡೀಲ್ ಮಾಡುತ್ತಿಲ್ಲ ಎಂದು ಸಿಇಓ ಮೆರಿಟೈಮ್ ಬೊರ್ಡ್ ಬಾಲಚಂದ್ರ ಅವರು ನ್ಯೂಸ್18 ಕನ್ನಡಕ್ಕೆ ತಿಳಿಸಿದ್ದಾರೆ.
ಇನ್ನು, ಕಾರವಾರದ ವಾಣಿಜ್ಯ ಬಂದರಿಗೆ ಇರಾನ್‌ನಿಂದ ಬಿಟುಮಿನ್ ಬರುತ್ತಿತ್ತು. ಆದರೆ ಇದೀಗ ಹರ್ಮುಜ್ ಜಲಸಂಧಿ ಮಾರ್ಗ ಬಂದ್ ಆಗಿರುವ ಹಿನ್ನೆಲೆ ಬಿಟುಮಿನ್ ಬರುತ್ತಿಲ್ಲ. ಇದರಿಂದ ಟ್ಯಾಂಕರ್ ಮಾಲೀಕರು, ಚಾಲಕರು ತೀವ್ರ ನಷ್ಟ ಅನುಭವಿಸುತ್ತಿದ್ದಾರೆ. ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ರಸ್ತೆ ಕಾಮಗಾರಿಗಳು ನಡೆಯುತ್ತಿದ್ದು ಡಾಂಬರ್ ಅವಶ್ಯಕತೆಯಿದೆ. ಆದರೆ ಇದೀಗ ಎಲ್ಲವೂ ಸ್ತಬ್ಧವಾಗಿದ್ದು, ಡಾಂಬರ್ ಸ್ಟಾಕ್ ಕಂಪನಿ ಆಡಳಿತ ಮಂಡಳಿ ತೀವ್ರ ಕಳವಳ ವ್ಯಕ್ತಪಡಿಸಿದೆ.