TuluMovie: ಕ್ರಿಕೆಟ್ ಸೀಸನ್‌ಗೆ ತುಳು ಪ್ರೇಕ್ಷಕರೆದುರು ಬರುತ್ತಿದೆ ʼಗಜಾನನ ಕ್ರಿಕೆಟರ್ಸ್ʼ
ಮಣಿಪಾಲ: 90 ಎಂಎಲ್ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿರುವ ನಡುವಲ್ಲಿ ನಟ ವಿನೀತ್ ಕುಮಾರ್ ನಟನೆಯ ಮತ್ತೊಂದು ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಅದುವೇ ʼಗಜಾನನ ಕ್ರಿಕೆಟರ್ಸ್ʼ
ಹೌದು, ಖ್ಯಾತ ಚಿತ್ರ ಸಾಹಿತಿ ಕೀರ್ತನ್ ಭಂಡಾರಿ ನಿರ್ದೇಶನದ ʼಗಜಾನನ ಕ್ರಿಕೆಟರ್ಸ್ʼ ಚಿತ್ರಕ್ಕೆ ಬಿಡುಗಡೆ ಭಾಗ್ಯ ಕೂಡಿಬಂದಿದೆ. ಎಲ್ಲವೂ ಲೆಕ್ಕಾಚಾರದಂತೆ ನಡೆದಿದ್ದರೆ ಈ ಚಿತ್ರವು ಕಳೆದ ಜನವರಿಯಲ್ಲಿ ರಿಲೀಸ್ ಆಗಬೇಕಿತ್ತು, ಆದರೆ ಕಾರಣಾಂತರಗಳಿಂದ ಮುಂದೂಡಿಕೆಯಾದ ಸಿನಿಮಾ ಇದೀಗ ಮೇ ಅಂತ್ಯದಲ್ಲಿ ಜನರೆದುರು ಬರುತ್ತಿದೆ. ಮೇ 29ರಂದು ಚಿತ್ರ ರಿಲೀಸ್ ಆಗಲಿದೆ.
ಅಂಡರ್ ಆರ್ಮ್ ಕ್ರಿಕೆಟ್ ಮತ್ತು ಆಟಗಾರರ ಬದುಕಿನ ಬಗ್ಗೆ ಕಥಾನಕ ಹೊಂದಿರುವ ʼಗಜಾನನ ಕ್ರಿಕೆಟರ್ಸ್ʼ ಚಿತ್ರಕ್ಕೆ Since 1983 ಎಂಬ ಟ್ಯಾಗ್ ಲೈನ್ ನೀಡಲಾಗಿದೆ. ಚಿತ್ರದ ಪ್ರೀಮಿಯರ್ ಶೋ ಈಗಾಗಲೇ ಗಲ್ಫ್ ದೇಶಗಳಲ್ಲಿ ನಡೆದಿದೆ. ವಿಜಯ್ ಪ್ರಕಾಶ್ ಹಾಡಿರುವ ಚಿತ್ರದ ʼಕನ್ನಿಕೆʼ ಹಾಡು ಕೂಡಾ ಹಿಟ್ ಲಿಸ್ಟ್ ಸೇರಿದೆ. ಪ್ರಜ್ವಲ್ ಫಿಲಂಸ್ ಬ್ಯಾನರ್ ನಡಿಯಲ್ಲಿ ಪ್ರಜ್ವಲ್ ಶೆಟ್ಟಿ ಬಂಡವಾಳ ಹೂಡಿರುವ ಸಿನಿಮಾಗೆ ಕೀರ್ತನ್ ಭಂಡಾರಿ ಆಕ್ಷನ್ ಕಟ್ ಹೇಳಿದ್ದಾರೆ. ಈಗಾಗಲೇ ತುಳು ಸಿನಿಮಾ ಹಾಡುಗಳಿಗೆ ಸಾಹಿತ್ಯ ಬರೆದು ಹೆಸರು ಮಾಡಿರುವ ಕೀರ್ತನ್ ಭಂಡಾರಿ ಅವರು ಇದೇ ಮೊದಲು ಬಾರಿಗೆ ಡೈರೆಕ್ಟನ್ ಸೀಟ್ ನಲ್ಲಿ ಕುಳಿತಿದ್ದಾರೆ.
ಚಿತ್ರದ ತಾರಾಗಣದಲ್ಲಿ ವಿನೀತ್ ಕುಮಾರ್, ಸಮತಾ ಅಮೀನ್, ಅನ್ವಿತಾ ಸಾಗರ್, ನವೀನ್ ಡಿ. ಪಡೀಲ್, ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರು, ದೀಪಕ್ ರೈ ಪಾಣಾಜೆ, ಪ್ರಕಾಶ್ ತುಮಿನಾಡು, ಉಮೇಶ್ ಮಿಜಾರು, ಸರ್ವೋತ್ತಮ ಶೆಟ್ಟಿ, ವಾಲ್ಟರ್ ನಂದಳಿಕೆ, ರೂಪಾ ವರ್ಕಾಡಿ, ಲಂಚೂಲಾಲ್, ಪ್ರಸನ್ನ ಶೆಟ್ಟಿ ಬೈಲೂರು, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ಪುಷ್ಪರಾಜ್ ಬೊಳ್ಳಾರು, ಸಚಿನ್ ಮಾಡ, ಜೇಮ್ಸ್ ಮೆಂಡೋನ್ಸಾ, ಕರಣ್ ಪೂಜಾರಿ ಸೇರಿದಂತೆ ಅನೇಕ ಕಲಾವಿದರು ನಟಿಸಿದ್ದಾರೆ.
ಚಿತ್ರಕ್ಕೆ ಸೃಜನ್ ಕುಮಾರ್ ತೋನ್ಸೆ ಸಂಗೀತ, ಪ್ರಸನ್ನ ಶೆಟ್ಟಿ ಬೈಲೂರು ಅವರ ಸಂಭಾಷಣೆ, ವಿನುತ್ ಕೆ ಅವರ ಕ್ಯಾಮರಾ ಕೈಚಳಕವಿದೆ.
ಕರಾವಳಿ ಭಾಗದಲ್ಲಿ ಹೆಚ್ಚು ಜನಪ್ರಿಯವಾಗಿರುವ ಅಂಡರ್ ಆರ್ಮ್ ಕ್ರಿಕೆಟ್ ಆಟದ ಬಗ್ಗೆ ಕಥಾಹಂದರ ಹೊಂದಿರುವ ʼಗಜಾನನ ಕ್ರಿಕೆಟರ್ಸ್ʼ ಚಿತ್ರವು ಮೇ 29ರಂದು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ