ಮಹಿಳಾ ಮೀಸಲಾತಿ ವಿಚಾರ: ಕಾಂಗ್ರೆಸ್ - ಎಸ್ಪಿ ವಿರುದ್ಧ ಮಾಯಾವತಿ ತೀವ್ರ ವಾಗ್ದಾಳಿ!
ಲಕ್ನೋ: ಮಹಿಳಾ ಮೀಸಲಾತಿ ವಿಚಾರವಾಗಿ ಬಿಎಸ್ಪಿ ಅಧ್ಯಕ್ಷೆ ಮಾಯಾವತಿ ಅವರು ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದ (ಎಸ್ಪಿ) ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಈ ಎರಡೂ ಪಕ್ಷಗಳು ಓಟ್ ಬ್ಯಾಂಕ್ ರಾಜಕೀಯಕ್ಕಾಗಿ "ಊಸರವಳ್ಳಿಯಂತೆ ಬಣ್ಣ ಬದಲಾಯಿಸುತ್ತಿವೆ" ಎಂದು ಅವರು ಕಿಡಿಕಾರಿದ್ದಾರೆ. ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಕುರಿತ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಮಾಯಾವತಿ ಅವರು ಈ ಹೇಳಿಕೆ ನೀಡಿದ್ದಾರೆ.ಈ ಕುರಿತು ಸುದೀರ್ಘ ಪೋಸ್ಟ್ ಹಂಚಿಕೊಂಡಿರುವ ಅವರು, ಕಾಂಗ್ರೆಸ್ ಪಕ್ಷವು ತನ್ನ ಆಡಳಿತಾವಧಿಯಲ್ಲಿ ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST) ಮತ್ತು ಇತರ ಹಿಂದುಳಿದ ವರ್ಗಗಳ (OBC) ಮಹಿಳೆಯರಿಗೆ ಮೀಸಲಾತಿ ನೀಡಲು ಯಾವುದೇ ಕ್ರಮ ಕೈಗೊಂಡಿರಲಿಲ್ಲ.
ಆದರೆ ಈಗ ಅದೇ ವರ್ಗಗಳ ಬಗ್ಗೆ ಮಾತನಾಡುತ್ತಿರುವುದು ಹಾಸ್ಯಾಸ್ಪದ.ಮಂಡಲ್ ಆಯೋಗದ ವರದಿಯಂತೆ ಒಬಿಸಿ ಸಮುದಾಯಕ್ಕೆ ಶೇ. 27 ರಷ್ಟು ಮೀಸಲಾತಿ ನೀಡಲು ಕಾಂಗ್ರೆಸ್ ಹಿಂದೇಟು ಹಾಕಿತ್ತು. ಅಂತಿಮವಾಗಿ ವಿ.ಪಿ. ಸಿಂಗ್ ಅವರ ಸರ್ಕಾರ ಅದನ್ನು ಜಾರಿಗೆ ತಂದಿತು ಎಂದು ನೆನಪಿಸಿದ್ದಾರೆ. ಸಮಾಜವಾದಿ ಪಕ್ಷದ ವಿರುದ್ಧವೂ ಹರಿಹಾಯ್ದ ಮಾಯಾವತಿ, "ಯುಪಿಯಲ್ಲಿ ಸಮಾಜವಾದಿ ಪಕ್ಷದ ಸರ್ಕಾರವಿದ್ದಾಗ ಹಿಂದುಳಿದ ವರ್ಗಗಳ ಆಯೋಗದ ವರದಿಯನ್ನು ಕಸದ ಬುಟ್ಟಿಗೆ ಹಾಕಲಾಗಿತ್ತು. ಆದರೆ 1995 ರಲ್ಲಿ ಅಧಿಕಾರಕ್ಕೆ ಬಂದ ಬಿಎಸ್ಪಿ ಸರ್ಕಾರ ಅದನ್ನು ತಕ್ಷಣ ಜಾರಿಗೆ ತಂದಿತು. ಅಧಿಕಾರದಲ್ಲಿ ಇಲ್ಲದಿದ್ದಾಗ ಒಂದು ಮಾತು, ಅಧಿಕಾರಕ್ಕೆ ಬಂದಾಗ ಜಾತಿವಾದಿ ಧೋರಣೆ ವಹಿಸಿಕೊಳ್ಳುವುದು ಎಸ್ಪಿ ಪಕ್ಷದ ಚಾಳಿಯಾಗಿದೆ.
ಇಂತಹ ಮೋಸದ ಪಕ್ಷಗಳ ಬಗ್ಗೆ ದಲಿತರು ಮತ್ತು ಹಿಂದುಳಿದ ವರ್ಗದವರು ಎಚ್ಚರದಿಂದಿರಬೇಕು" ಎಂದು ಎಚ್ಚರಿಸಿದ್ದಾರೆ. ಮಹಿಳಾ ಮೀಸಲಾತಿ ಅನುಷ್ಠಾನದ ವಿಳಂಬದ ಬಗ್ಗೆಯೂ ಮಾತನಾಡಿದ ಅವರು, 2011 ರ ಜನಗಣತಿಯ ಆಧಾರದ ಮೇಲೆ ಕ್ಷೇತ್ರ ಮರುವಿಂಗಡಣೆ ಮಾಡಿ ಮೀಸಲಾತಿಯನ್ನು ಜಾರಿಗೆ ತರಬೇಕೆಂಬ ನಿಲುವನ್ನು ಬೆಂಬಲಿಸಿದ್ದಾರೆ. "ಯಾವುದೇ ಪಕ್ಷಗಳು ದಲಿತರು ಮತ್ತು ಮುಸ್ಲಿಂ ಸಮುದಾಯದ ಅಭಿವೃದ್ಧಿಯ ಬಗ್ಗೆ ಗಂಭೀರವಾಗಿಲ್ಲ. ಆದ್ದರಿಂದ ಸದ್ಯಕ್ಕೆ ಸಿಗುತ್ತಿರುವುದನ್ನು ಒಪ್ಪಿಕೊಂಡು ಮುಂದಿನ ದಿನಗಳಲ್ಲಿ ತಮ್ಮ ಹಕ್ಕುಗಳಿಗಾಗಿ ಹೋರಾಡಬೇಕು" ಎಂದು ಅವರು ಕರೆ ನೀಡಿದ್ದಾರೆ.