'ನಿಮ್ಮ ಹತ್ತಿರ ಇರೋದು ಐಪಿಎಲ್ ರಿಜೆಕ್ಟ್ ಮಾಡಿದ ಪ್ಲೇಯರ್ಸ್ ಮಾತ್ರ': PSL ಮರ್ಯಾದೆ ಹರಾಜು ಮಾಡಿದ ಪಾಕ್ ಕ್ರಿಕೆಟಿಗ!
ಕರಾಚಿ (ಏ.15): ಭಾರತದ ಐಪಿಎಲ್ ಮತ್ತು ಪಾಕಿಸ್ತಾನದ ಪಿಎಸ್‌ಎಲ್ ನಡುವೆ ಶ್ರೇಷ್ಠತೆಯ ಬಗ್ಗೆ ನಡೆಯುತ್ತಿರುವ ಚರ್ಚೆಗಳಿಗೆ ಪಾಕಿಸ್ತಾನದ ಅನುಭವಿ ಕ್ರಿಕೆಟಿಗ ಅಹ್ಮದ್ ಶೆಹಜಾದ್ ಖಡಕ್ ಉತ್ತರ ನೀಡಿದ್ದಾರೆ. ಪಿಎಸ್‌ಎಲ್ 2026ರ ಹರಾಜಿನಲ್ಲಿ ಅನ್‌ಸೋಲ್ಡ್ ಆಗಿದ್ದ ಶೆಹಜಾದ್, ಪಾಕಿಸ್ತಾನಿ ಲೀಗ್‌ನಲ್ಲಿ ಆಡುತ್ತಿರುವ ವಿದೇಶಿ ಆಟಗಾರರು ಕೇವಲ ನಿವೃತ್ತರಾದವರು ಅಥವಾ ಐಪಿಎಲ್‌ನಲ್ಲಿ ಯಾರೂ ಖರೀದಿಸದ ಆಟಗಾರರು ಎಂಬ ಕಟು ಸತ್ಯವನ್ನು ಬಿಚ್ಚಿಟ್ಟಿದ್ದಾರೆ. ಶ್ರೀಲಂಕಾದ ಕುಸಲ್ ಮೆಂಡಿಸ್ ಮತ್ತು ದಕ್ಷಿಣ ಆಫ್ರಿಕಾದ ರಿಲೀ ರೊಸೊ ಅವರನ್ನು ಪಾಕಿಸ್ತಾನಿ ಪತ್ರಕರ್ತರು ಐಪಿಎಲ್ ಮತ್ತು ಪಿಎಸ್‌ಎಲ್ ಅನುಭವಗಳನ್ನು ಹೋಲಿಕೆ ಮಾಡುವಂತೆ ಕೇಳಿದ ಪ್ರಶ್ನೆಗೆ ಶೆಹಜಾದ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಪಿಎಸ್‌ಎಲ್‌ನಲ್ಲಿ ಈಗ ಉಳಿದಿರುವುದು ಕೇವಲ ಐಪಿಎಲ್‌ನಿಂದ ನಿವೃತ್ತರಾದವರು ಅಥವಾ ಐಪಿಎಲ್ ಹರಾಜಿನಲ್ಲಿ ಯಾರೂ ಬೇಡವೆಂದ ಆಟಗಾರರು ಮಾತ್ರ. ಯಾರಿಗೆ ಐಪಿಎಲ್‌ನಲ್ಲಿ ಆಡುವ ಸಣ್ಣ ಅವಕಾಶವಿದ್ದರೂ ಅವರು ಐಪಿಎಲ್‌ನ್ನೇ ಆಯ್ಕೆ ಮಾಡುತ್ತಾರೆ (ಉದಾಹರಣೆಗೆ ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್). ಇನ್ನು ಎಷ್ಟು ಆಟಗಾರರನ್ನು ನೀವು ನಿಷೇಧಿಸುತ್ತೀರಿ?" ಎಂದು ಪಿಸಿಬಿ ವಿರುದ್ಧ ಗುಡುಗಿದ್ದಾರೆ. ಐಪಿಎಲ್‌ನಲ್ಲಿ ಆಡಲು ಪಿಎಸ್‌ಎಲ್ ಒಪ್ಪಂದವನ್ನು ಅರ್ಧಕ್ಕೆ ಬಿಟ್ಟು ಹೋಗುವ ವಿದೇಶಿ ಆಟಗಾರರನ್ನು ನಿಷೇಧಿಸುತ್ತಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (PCB) ಕ್ರಮವನ್ನು ಅವರು ಪ್ರಶ್ನಿಸಿದ್ದಾರೆ.