ಮುಖ್ಯಮಂತ್ರಿ ಬದಲಾವಣೆ ಚರ್ಚೆ ಸಹಜ: ಡಾ.ಯತೀಂದ್ರ ಸಿದ್ದರಾಮಯ್ಯ
ಬೈಲಹೊಂಗಲ: ಮುಖ್ಯಮಂತ್ರಿ ಬದಲಾವಣೆ ಕುರಿತು ನಡೆಯುತ್ತಿರುವ ಚರ್ಚೆಗಳು ಸಹಜ. ರಾಜ್ಯದ ಜನರಿಗೆ ಒಳ್ಳೆಯದು ಆಗುವುದೇ ಮುಖ್ಯ ಎಂದು ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿದರು. ತಾಲೂಕಿನ ನಯಾನಗರ ಗ್ರಾಮದಲ್ಲಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತಮ್ಮ ತಂದೆ ಮುಂದಿನ ಐದು ವರ್ಷ ರಾಜ್ಯವನ್ನು ಮುನ್ನಡೆಸಲಿ ಎಂಬುದು ವೈಯಕ್ತಿಕ ಆಶಯ ಮಾತ್ರ. ಐದು ವರ್ಷ ಆಡಳಿತ ಕುರಿತು ಮುಖ್ಯಮಂತ್ರಿಯವರು ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ಈ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ ಎಂದರು.
136 ಶಾಸಕರಿದ್ದರೂ ಸಿಎಂ ಬದಲಾವಣೆ ಚರ್ಚೆ ನಡೆಯುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಎಲ್ಲ ಸರ್ಕಾರಗಳಲ್ಲಿಯೂ ಇಂತಹ ಚರ್ಚೆಗಳು ಸಹಜ. ಬಿಜೆಪಿ ಸರ್ಕಾರದಲ್ಲಿಯೂ ಮುಖ್ಯಮಂತ್ರಿಗಳ ಬದಲಾವಣೆ ನಡೆದಿತ್ತು. ಎಲ್ಲ ಪಕ್ಷಗಳಲ್ಲಿಯೂ ಸಿಎಂ ಆಕಾಂಕ್ಷಿಗಳು ಇರುವುದು ಸಾಮಾನ್ಯ ಎಂದು ಹೇಳಿದರು. ಕಾಂಗ್ರೆಸ್‌ನಲ್ಲಿ ಗೊಂದಲ ಬಗೆಹರಿಸುವಂತೆ ಒತ್ತಾಯಿಸಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಗೊಂದಲವಾಗದಂತೆ ಹೈಕಮಾಂಡ್ ಸೂಕ್ತ ನಿರ್ಧಾರ ಕೈಗೊಳ್ಳುತ್ತದೆ ಎಂದರು. ಸಚಿವ ಸಂಪುಟ ಪುನರ್‌ರಚನೆ ಕುರಿತು ಮಾತನಾಡಿ, ಸರ್ಕಾರದ ಅರ್ಧಾವಧಿಯ ಬಳಿಕ ಪುನರ್‌ರಚನೆ ಆಗುವುದು ವಾಡಿಕೆ. ಶಾಸಕರು ಮನವಿಕೊಂಡಿದ್ದು, ವರಿಷ್ಠರು ಅಂತಿಮ ತೀರ್ಮಾನ ಕೈಗೊಳ್ಳುತ್ತಾರೆ ಎಂದರು.
ಸಚಿವ ಸಂಪುಟದಲ್ಲಿ ಅನುಭವಿಗಳು, ಹೊಸಬರು ಅವಶ್ಯ: ತಮ್ಮನ್ನು ಸಚಿವರನ್ನಾಗಿ ಮಾಡುವ ಸಾಧ್ಯತೆ ಕುರಿತು ಕೇಳಿದ ಪ್ರಶ್ನೆಗೆ, ತಂದೆ ಮುಖ್ಯಮಂತ್ರಿ ಇರುವವರೆಗೆ ಸಚಿವ ಸ್ಥಾನಕ್ಕೆ ನಾನು ಆಕಾಂಕ್ಷಿ ಅಲ್ಲ. ಹಿರಿಯರು, ಅನುಭವಿಗಳಿಗೆ ಅವಕಾಶ ಸಿಗಬೇಕು. ಹೊಸ ಶಾಸಕರು ಸಚಿವ ಸ್ಥಾನ ಕೇಳುವುದು ಸಹಜ. ಯಾವುದೇ ಸಚಿವ ಸಂಪುಟದಲ್ಲಿ ಹೊಸಬರು ಹಾಗೂ ಅನುಭವಿಗಳಿರುತ್ತಾರೆ ಎಂದರು. ಬಾಗಲಕೋಟೆ ಹಾಗೂ ದಾವಣಗೆರೆ ಉಪಚುನಾವಣೆ ಕುರಿತು ಮಾತನಾಡಿ, ಎರಡೂ ಕಡೆ ಉತ್ತಮ ವಾತಾವರಣ ಇದೆ. ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುವ ವಿಶ್ವಾಸ ವ್ಯಕ್ತಪಡಿಸಿದರು. ವಿನಯ ಕುಲಕರ್ಣಿ ಪ್ರಕರಣದ ಕುರಿತು ಪ್ರತಿಕ್ರಿಯಿಸಿ, ಕೋರ್ಟ್ ತಪ್ಪಿತಸ್ಥ ಎಂದು ಹೇಳಿದೆ. ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಅವಕಾಶವಿದ್ದು, ಕಾನೂನು ಹೋರಾಟ ಮುಂದುವರಿಯಲಿದೆ ಎಂದರು.