ಚಾರಣಕ್ಕೆ ಹೋಗ್ತೀರಾ?: ಗೈಡ್, ಮೊಬೈಲ್ ಆ್ಯಪ್ ಕಡ್ಡಾಯ
ಬೆಂಗಳೂರು: ರಾಜ್ಯದಲ್ಲಿ ಅರಣ್ಯ ಇಲಾಖೆ ವ್ಯಾಪ್ತಿಗೆ ಒಳಪಡುವ ಎಲ್ಲ ಅನುಮೋದಿತ ಚಾರಣ ಪಥಗಳಲ್ಲಿ ಇನ್ನು ಮುಂದೆ ಪ್ರಕೃತಿ ಮಾರ್ಗದರ್ಶಕ (ನೇಚರ್ ಗೈಡ್) ಇಲ್ಲದೆ ಚಾರಣಕ್ಕೆ ಅವಕಾಶ ಇರುವುದಿಲ್ಲ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಸ್ಪಷ್ಟಪಡಿಸಿದ್ದಾರೆ. ಚಾರಣಿಗರ ಸುರಕ್ಷತೆಗಾಗಿ ರೂಪಿಸಲಾಗಿರುವ ಪ್ರಮಾಣಿತ ಕಾರ್ಯಾಚರಣೆ ವಿಧಾನ (ಎಸ್‌ಒಪಿ) ಬಿಡುಗಡೆಗೊಳಿಸಿದ್ದಾರೆ. ಪ್ರತಿ 10 ಚಾರಣಿಗರಿಗೆ ಒಬ್ಬರು ಸ್ಥಳೀಯ ಪ್ರಕೃತಿ ಮಾರ್ಗದರ್ಶಕರು ಕಡ್ಡಾಯ. ಚಾರಣಕ್ಕೆ ಬರುವವರು ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಳ್ಳುವುದೂ ಕಡ್ಡಾಯ.
ಒಂದೊಮ್ಮೆ ಯಾವುದೇ ದಿನ ಒಬ್ಬರೇ ಚಾರಣಿಗರು ನೋಂದಾಯಿಸಿದ್ದರೂ ಗೈಡ್ ಸೌಲಭ್ಯ ಕಲ್ಪಿಸಲಾಗುವುದು, ಗೈಡ್ ಇಲ್ಲದೆ ಚಾರಣಕ್ಕೆ ಅವಕಾಶವಿಲ್ಲ. ಇನ್ನು ಮುಂದೆ ಪ್ರತಿಯೊಂದು ಚಾರಣ ಪಥದಲ್ಲೂ ನೇಚರ್ ಗೈಡ್‌ಗಳಿಗೆ ಜಿಪಿಎಸ್ ಅಳವಡಿಸಿದ ವಾಕಿಟಾಕಿಯನ್ನು ಕಡ್ಡಾಯವಾಗಿ ನೀಡಲಾಗುವುದು. ಅದೇ ರೀತಿ ಪ್ರತಿಯೊಬ್ಬ ಚಾರಣಿಗರ ಮೊಬೈಲ್‌ಗೆ ಚಾರಣಪಥದ ನಕ್ಷೆ ಸಹಿತ ಆ್ಯಪ್ ಅಳವಡಿಸಲಾಗುವುದು. ಅಪ್ರಾಪ್ತ ವಯಸ್ಕರು ಚಾರಣಕ್ಕೆ ತೆರಳಲು ಅವರ ಪಾಲಕರ, ಪೋಷಕರ ಅನುಮತಿ ಪತ್ರ ಕಡ್ಡಾಯ. ಫ್ಲಾಶ್ ಬಳಸಿ ಫೋಟೋ ತೆಗೆಯುವುದನ್ನು, ಏಕ ಬಳಕೆ ಪ್ಲಾಸ್ಟಿಕ್ ಬ್ಯಾಗ್ ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ.
ಅರಣ್ಯ ಇಲಾಖೆ ವ್ಯಾಪ್ತಿಯ ಚಾರಣ ಪಥಗಳ ಮುಂಗಡ ಟಿಕೆಟ್ ಕಾಯ್ದಿರಿಸಲು ಅವಕಾಶ ಆಗುವಂತೆ ಎಲ್ಲ ಚಾರಣ ಪಥಗಳನ್ನೂ https://aranyavihaara.karnataka.gov.in/ ಅಂತರ್ಜಾಲ ತಾಣದಲ್ಲಿ ಸೇರ್ಪಡೆ ಮಾಡುವಂತೆ ಸೂಚನೆ ನೀಡಿರುವುದಾಗಿಯೂ ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದರು. ಈ ಸಂದರ್ಭದಲ್ಲಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಅರಣ್ಯ ಪಡೆ ಮುಖ್ಯಸ್ಥೆ ಮೀನಾಕ್ಷಿ ನೇಗಿ, ಮುಖ್ಯ ವನ್ಯಜೀವಿ ಪರಿಪಾಲಕ ಕುಮಾರ್ ಪುಷ್ಕರ್, ಎಪಿಸಿಸಿಎಫ್ ಬಿಸ್ವಜಿತ್ ಮಿಶ್ರ ಹಾಗೂ ಪ್ರಧಾನ ಕಾರ್ಯದರ್ಶಿ ಮನೋಜ್ ಕುಮಾರ್ ಇದ್ದರು.