ಟ್ರಂಪ್ ಆದೇಶದಂತೆ ಇಸ್ರೇಲ್‌ಗೆ ತೆರಳಿದ್ದ ಪ್ರಧಾನಿ ಮೋದಿ: ರಾಹುಲ್ ಟೀಕೆ
ತೂತುಕುಡಿ: 'ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆದೇಶದ ಮೇರೆಗೆ ಪ್ರಧಾನಿ ನರೇಂದ್ರ ಮೋದಿ ಇಸ್ರೇಲ್ ದೇಶಕ್ಕೆ ಭೇಟಿ ಕೊಟ್ಟಿದ್ದರು' ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಫೆಬ್ರುವರಿ 28ರಂದು ಅಮೆರಿಕ ಹಾಗೂ ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ದಾಳಿ ನಡೆಸಿತ್ತು. ಇದಕ್ಕೂ ಮೊದಲು ಪ್ರಧಾನಿ ಮೋದಿ ಅವರು ಇಸ್ರೇಲ್ ಪ್ರವಾಸವನ್ನು ಕೈಗೊಂಡಿದ್ದರು. ತಮಿಳುನಾಡಿನ ತೂತುಕುಡಿಯಲ್ಲಿ ಚುನಾವಣಾ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ರಾಹುಲ್, 'ಇರಾನ್‌ನಲ್ಲಿ ಯುದ್ಧ ಪ್ರಾರಂಭವಾಗುವ ಮೊದಲು ಟ್ರಂಪ್ ಹೇಳಿದ್ದನ್ನು ಪ್ರಧಾನಿ ಮೋದಿ ಚಾಚು ತಪ್ಪದೇ ಪಾಲಿಸಿದ್ದಾರೆ' ಎಂದು ಆರೋಪಿಸಿದ್ದಾರೆ.
'ಟ್ರಂಪ್ ಹೇಳಿದರೆ ಮೋದಿ ಎಲ್ಲಿಗೆ ಬೇಕಾದರೂ ಹಾರುತ್ತಾರೆ' ಎಂದು ರಾಹುಲ್ ವ್ಯಂಗ್ಯವಾಡಿದ್ದಾರೆ. 'ಇರಾನ್ ಯುದ್ಧಕ್ಕಿಂತ ಮೊದಲು ಇದ್ದಕ್ಕಿದಂತೆ ಮೋದಿ ಅವರನ್ನು ಇಸ್ರೇಲ್‌ಗೆ ಹೋಗಲು ಹೇಳಲಾಯಿತು. ಅಂತಹ ನಡವಳಿಕೆಗೆ ಕಾರಣ ಬಹಳ ಸರಳವಾಗಿದೆ. 'ಎಪ್‌ಸ್ಟೈನ್ ಫೈಲ್ಸ್' ಹಾಗೂ 'ಅದಾನಿ ಫೈಲ್ಸ್' ಎಂದು ವಾಗ್ದಾಳಿ ನಡೆಸಿದ್ದಾರೆ.