Select Location
All Locations
State
Region
City / District
ಬೀದರ್‌: ಸಡಗರ, ಸಂಭ್ರಮದಿಂದ ಸಾಂಸ್ಕೃತಿಕ ನಾಯಕ ಬಸವೇಶ್ವರರ ಜಯಂತಿ ಆಚರಣೆ

ಬೀದರ್‌: ಸಡಗರ, ಸಂಭ್ರಮದಿಂದ ಸಾಂಸ್ಕೃತಿಕ ನಾಯಕ ಬಸವೇಶ್ವರರ ಜಯಂತಿ ಆಚರಣೆ

ಬೀದರ್‌: ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಜಯಂತಿಯನ್ನು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಸೋಮವಾರ ಸಡಗರ, ಸಂಭ್ರಮ ಹಾಗೂ ಶ್ರದ್ಧಾ, ಭಕ್ತಿಯಿಂದ ಆಚರಿಸಲಾಯಿತು. ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಡಿಸಿ ಶಿಲ್ಪಾ ಶರ್ಮಾ ಅವರು ಬಸವೇಶ್ವರರ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ ಗೌರವ ಸಲ್ಲಿಸಿದರು. ಆನಂತರ ನಗರದ ಬಸವೇಶ್ವರ ವೃತ್ತದಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ, ಪೌರಾಡಳಿತ ಸಚಿವ ರಹೀಂ ಖಾನ್‌ ಪೂಜೆ ಸಲ್ಲಿಸಿದರು. ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಬಳಿಕ ಮಾತನಾಡಿದ ಈಶ್ವರ ಬಿ.‌ಖಂಡ್ರೆ, ಮಹಾ ಪುರುಷರ ಜಯಂತಿ ಆಚರಣೆಯ ಉದ್ದೇಶ ಅವರ ತತ್ವ ಸಂದೇಶ, ಆದರ್ಶ ನಮ್ಮ ವೈಯಕ್ತಿಕ ಜೀವನದಲ್ಲಿ ಅಳವಡಿಸಿಕೊಂಡು ಸಮಾಜದಲ್ಲಿ ಸುಧಾರಣೆ ತರಬೇಕೆನ್ನುವುದು. 

ಅದರಿಂದ ನಮಗೆ ಪ್ರೇರಣೆ, ಸ್ಫೂರ್ತಿ ಸಿಗಬೇಕೆನ್ನುವುದು ಎಂದರು. ಈ ಜಗತ್ತಿನ ವಿಸ್ಮಯ ವಿಶ್ವಗುರು ಬಸವಣ್ಣ. ಸಮಾನತೆ ಇರಲಿಲ್ಲ, ಸ್ತ್ರೀಯರಿಗೆ ಸ್ವಾತಂತ್ರ್ಯ ಇರಲಿಲ್ಲ. ಮೌಢ್ಯ, ಅನ್ಯಾಯ,‌ ಕಂದಾಚಾರ, ವರ್ಣಭೇದ, ವರ್ಗಭೇದ ಇತ್ತು. ಅಂಥ ಸಂದರ್ಭದಲ್ಲಿ ಸಮಾಜದ ಅನಿಷ್ಠ ನಿರ್ಮೂಲನೆಗೆ ಶ್ರಮಿಸಿ ಸಮಾಜೋ ಧಾರ್ಮಿಕ ಕ್ರಾಂತಿ ಮಾಡಿದವರು ಬಸವಣ್ಣ. ಹೆಣ್ಣು, ಹೊನ್ನು, ಮಣ್ಣಿಗಾಗಿ ಜಗತ್ತಿನಲ್ಲಿ ಅನೇಕ ಕ್ರಾಂತಿ‌ಗಳು ನಡೆದಿವೆ. ಆದರೆ, ಸಮಾನತೆಗಾಗಿ‌ ಈ ನೆಲದಲ್ಲಿ ನಡೆದದ್ದು ಕಲ್ಯಾಣ ಕ್ರಾಂತಿ ಎಂದು ಹೇಳಿದರು.


Prajavani 1 hour ago
Home Flash News