ವಿಮಾನ ಪ್ರಯಾಣ ಈಗ ಸಂಕಷ್ಟದಲ್ಲಿದೆ! ದಿಢೀರ್ ಕೇಂದ್ರ ಸರ್ಕಾರದ ಮೊರೆ ಹೋದ ಏರ್‌ಲೈನ್ಸ್ ಸಂಸ್ಥೆಗಳು..!
ನವದೆಹಲಿ: ಭಾರತೀಯ ವಿಮಾನಯಾನ ಕ್ಷೇತ್ರವು ಈಗ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಜಾಗತಿಕವಾಗಿ ಕಚ್ಚಾ ತೈಲ ಬೆಲೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ವಿಮಾನ ಇಂಧನ (ATF) ದರ ಗಗನಕ್ಕೇರಿದ್ದು, ವಿಮಾನಯಾನ ಸಂಸ್ಥೆಗಳು ಕೇಂದ್ರ ಸರ್ಕಾರದ ತುರ್ತು ಮಧ್ಯಪ್ರವೇಶಕ್ಕೆ ಆಗ್ರಹಿಸಿವೆ. ಏರ್ ಇಂಡಿಯಾ, ಇಂಡಿಗೋ ಮತ್ತು ಸ್ಪೈಸ್‌ಜೆಟ್‌ನಂತಹ ಪ್ರಮುಖ ವಿಮಾನಯಾನ ಸಂಸ್ಥೆಗಳನ್ನು ಪ್ರತಿನಿಧಿಸುವ ಫೆಡರೇಶನ್ ಆಫ್ ಇಂಡಿಯನ್ ಏರ್‌ಲೈನ್ಸ್ (FIA), ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಪತ್ರ ಬರೆದಿದೆ.
ಪಶ್ಚಿಮ ಏಷ್ಯಾದಲ್ಲಿನ ಉದ್ವಿಗ್ನತೆಯಿಂದಾಗಿ ಜಾಗತಿಕವಾಗಿ ಕಚ್ಚಾ ತೈಲ ಬೆಲೆ ಏರಿಕೆಯಾಗಿದ್ದು, ಭಾರತದಲ್ಲಿ ವಿಮಾನ ಇಂಧನ ದರವು ಪ್ರತಿ ಕಿಲೋಲೀಟರ್‌ಗೆ 2 ಲಕ್ಷ ರೂಪಾಯಿಗಳ ಗಡಿ ದಾಟಿದೆ. ಇದು ಉದ್ಯಮದ ಮೇಲೆ ತೀವ್ರ ಒತ್ತಡ ಹೇರುತ್ತಿದೆ ಎಂದು FIA ಎಚ್ಚರಿಸಿದೆ. ಸಾಮಾನ್ಯವಾಗಿ ವಿಮಾನಯಾನ ಸಂಸ್ಥೆಯ ಒಟ್ಟು ನಿರ್ವಹಣಾ ವೆಚ್ಚದಲ್ಲಿ ಇಂಧನದ ಪಾಲು ಶೇ. 30 ರಿಂದ 40 ರಷ್ಟಿರುತ್ತದೆ. ಈಗಿನ ದರ ಏರಿಕೆಯಿಂದಾಗಿ ಇದು ಶೇ. 55 ರಿಂದ 60 ಕ್ಕೆ ಏರಿಕೆಯಾಗಿದೆ. ಇದರಿಂದ ಹಲವು ಮಾರ್ಗಗಳಲ್ಲಿ ವಿಮಾನಯಾನ ನಡೆಸುವುದು ಆರ್ಥಿಕವಾಗಿ ಅಸಾಧ್ಯವಾಗುತ್ತಿದೆ ಎಂದು ಸಂಸ್ಥೆಗಳು ಅಳಲು ತೋಡಿಕೊಂಡಿವೆ.