ಉಗ್ರರನ್ನು ಸಮರ್ಥನೆ ಮಾಡಿಕೊಳ್ಳುವವರು CM ಆಗಲು ಹೊರಟಿರುವುದು ದುರಂತ: ಆರ್.ಅಶೋಕ
ಬೆಂಗಳೂರು: ನಾಲ್ಕು ವೋಟಿಗೋಸ್ಕರ ಉಗ್ರ ಚಟುವಟಿಕೆಯಲ್ಲಿ ತೊಡಗಿಕೊಂಡವರನ್ನು ಬ್ರದರ್ಸ್ ಎಂದು ಸಮರ್ಥನೆ ಮಾಡಿಕೊಳ್ಳುವ ಸ್ವಾರ್ಥಿಗಳು ನಾಡಿನ ಮುಖ್ಯಮಂತ್ರಿ ಆಗಲು ಹೊರಟಿರುವುದು ಕರ್ನಾಟಕದ ದುರಂತ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಹೇಳಿದ್ದಾರೆ. ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟವನ್ನು ಕೇವಲ ‘ಡೈವರ್ಶನ್ ಪಾಲಿಟಿಕ್ಸ್’ ಎಂದು ಲೇವಡಿ ಮಾಡಿ ಉಗ್ರರ ಪರ ನಿಂತಿದ್ದ ಡಿ.ಕೆ.ಶಿವಕುಮಾರ್ ಮತ್ತು ಕಾಂಗ್ರೆಸ್ ನಾಯಕರಿಗೆ ಈಗ ಸತ್ಯದ ದರ್ಶನವಾಗಿದೆ ಎಂದು ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಉಗ್ರ ಶಾರೀಕ್‌ನ ಕೃತ್ಯ ಸಾಬೀತಾಗಿದ್ದು, ಎನ್‌ಐಎ ನ್ಯಾಯಾಲಯ ಆತನಿಗೆ 10 ವರ್ಷಗಳ ಕಠಿಣ ಶಿಕ್ಷೆ ವಿಧಿಸಿದೆ. ರಾಷ್ಟ್ರೀಯ ಭದ್ರತೆಯಂತಹ ಗಂಭೀರ ವಿಚಾರದಲ್ಲೂ ತುಷ್ಟೀಕರಣ ಮತ್ತು ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ನ ನೈಜ ಮುಖವಾಡ ಕಳಚಿದೆ ಎಂದು ಅವರು ಹೇಳಿದ್ದಾರೆ. ‘ಕಾಂಗ್ರೆಸ್‌ಗೆ ದೇಶದ ಭದ್ರತೆಗಿಂತ ವೋಟ್ ಬ್ಯಾಂಕ್ ರಾಜಕಾರಣವೇ ಮುಖ್ಯವಾಗಿದೆ. ಕಾಂಗ್ರೆಸ್ ಇನ್ನಾದರೂ ಮತಾಂಧರನ್ನು ತಮ್ಮ ಬ್ರದರ್ಸ್ ಎಂದು ಸಮರ್ಥನೆ ಮಾಡಿಕೊಳ್ಳುವುದನ್ನು ಬಿಡಬೇಕಿದೆ’ ಎಂದೂ ತಿಳಿಸಿದ್ದಾರೆ.