Select Location
All Locations
State
Region
City / District
ಪಂಚರಾಜ್ಯಗಳ ಚುನಾವಣೆ: ಹಿಂದಿನ ಸಮೀಕ್ಷೆಗಳಲ್ಲಿ ಸತ್ಯವಾಗಿದ್ದೆಷ್ಟು?

ಪಂಚರಾಜ್ಯಗಳ ಚುನಾವಣೆ: ಹಿಂದಿನ ಸಮೀಕ್ಷೆಗಳಲ್ಲಿ ಸತ್ಯವಾಗಿದ್ದೆಷ್ಟು?

ಕರ್ನಾಟಕದ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಉಪಚುನಾವಣೆ ಹಾಗೂ ಪಂಚರಾಜ್ಯಗಳ ಚುನಾವಣೋತ್ತರ ಮತಗಟ್ಟೆ ಸಮೀಕ್ಷೆ ಇಂದು (ಬುಧವಾರ) ಸಂಜೆ ಪ್ರಕಟಗೊಳ್ಳಲಿದೆ. ಕಳೆದ ಕೆಲ ಚುನಾವಣೆಗಳಿಂದ ಮತ ಎಣಿಕೆಯ ದಿನಕ್ಕಿಂತ ಚುನಾವಣೋತ್ತರ ಸಮೀಕ್ಷೆಗಳು ಹೆಚ್ಚು ಚರ್ಚೆಗೊಳಗಾಗುವುದರಿಂದ ವರ್ಷದಿಂದ ವರ್ಷಕ್ಕೆ ಸಮೀಕ್ಷೆ ನಡೆಸುವ ಸಂಸ್ಥೆಗಳ ಸಂಖ್ಯೆಯೂ ಹೆಚ್ಚುತ್ತಲೇ ಇದೆ.

ತಮಿಳುನಾಡು, ಪಶ್ಚಿಮ ಬಂಗಾಳ, ಪುದುಚೇರಿ, ಕೇರಳ ಹಾಗೂ ಅಸ್ಸಾಂ ರಾಜ್ಯಗಳ ವಿಧಾಸಭೆಗಳಿಗೆ ಕೊನೆಯ ಹಂತದ ಮತದಾನ ಇಂದು (ಬುಧವಾರ) ನಡೆಯಲಿದೆ. ಸಂಜೆ 6.30ರ ಚುನಾವಣೋತ್ತರ ಸಮೀಕ್ಷೆಯ ಫಲಿತಾಂಶಗಳನ್ನು ವಿವಿಧ ಸಂಸ್ಥೆಗಳು ಪ್ರಕಟಿಸಲಿವೆ. ಇವುಗಳಲ್ಲಿ ಯಾವುದು ವಾಸ್ತವಕ್ಕೆ ಹತ್ತಿರವಾಗಿರಲಿದೆ ಎಂಬುದಕ್ಕೆ ಮೇ 4ರಂದು ನಡೆಯುವ ಮತ ಎಣಿಕೆಯ ಪ್ರಕ್ರಿಯೆ ಮೂಲಕವೇ ಉತ್ತರ ಸಿಗಲಿದೆ. ಹೀಗಿದ್ದರೂ ಮತಗಟ್ಟೆ ಸಮೀಕ್ಷೆಗೆ ಭಾರೀ ಬೇಡಿಕೆ ಇದೆ. ಪಶ್ಚಿಮ ಬಂಗಾಳದಲ್ಲಿ ಕೊನೆಯ ಹಂತದ ಮತದಾನ ಇಂದು (ಏ. 29)ರಂದು ನಡೆಯುತ್ತಿದೆ.

142 ಕ್ಷೇತ್ರಗಳಿಗೆ ಮತದಾರರು ತಮ್ಮ ಪ್ರತಿನಿಧಿಯ ಆಯ್ಕೆಯಲ್ಲಿ ತೊಡಗಿದ್ದಾರೆ. ಮೊದಲ ಹಂತದ ಚುನಾವಣೆ ನಡೆದಿದ್ದರೂ ಮುಂದಿನ ಹಂತದ ಮತದಾನದ ಮೇಲೆ ಪ್ರಭಾವ ಉಂಟಾಗದಂತೆ ಅದರ ಮತಗಟ್ಟೆ ಸಮೀಕ್ಷೆಯನ್ನು ಪ್ರಕಟಿಸದಂತೆ ಚುನಾವಣಾ ಆಯೋಗ ನಿರ್ಬಂಧ ಹೇರಿದೆ. ಹೀಗಾಗಿ ಕರ್ನಾಟದ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಕ್ಷೇತ್ರಗಳ ಉಪಚುನಾವಣೆಯ ಸಮೀಕ್ಷೆಗಳೂ ಇಂದೇ ಪ್ರಕಟವಾಗುವ ಸಾಧ್ಯತೆವಳಿವೆ. ಚುನಾವಣೋತ್ತರ ಸಮೀಕ್ಷೆ ಎಂದರೇನು? ಮತದಾನದ ಮಾದರಿಯನ್ನು ಅಳೆಯುವ ವಿಧಾನವನ್ನು ಆಧರಿಸಿ ಚುನಾವಣೋತ್ತರ ಸಮೀಕ್ಷೆ ನಡೆಸಲಾಗುತ್ತದೆ. 

ಮತಗಟ್ಟೆಗಳ ಬಳಿ ಮತದಾರರನ್ನು ಮಾತನಾಡಿಸಿ ಅವರಿಗೆ ಒಂದಷ್ಟು ನಿರ್ದಿಷ್ಟ ಪ್ರಶ್ನೆಗಳನ್ನು ಕೇಳುವ ಮೂಲಕ ಅವರಿಂದ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ. ಸಂಗ್ರಹಿಸಿದ ಮಾದರಿಯನ್ನು ಸಂಖ್ಯಾಶಾಸ್ತ್ರದ ವಿಧಾನಗಳ ಮೂಲಕ ಸಂಸ್ಕರಿಸಿ ಸೆಫಾಲಜಿಸ್ಟ್‌ಗಳು ಸಮೀಕ್ಷೆಯನ್ನು ಬಿಡುಗಡೆ ಮಾಡುತ್ತಾರೆ. ಮಾದರಿ ಸಂಗ್ರಹ: ಈ ಪ್ರಕ್ರಿಯೆಯಲ್ಲಿ ಚುನಾವಣಾ ಏಜೆಂಟರು ಸಮೀಕ್ಷೆಗೆ ಮತಗಟ್ಟೆಗಳನ್ನು ಆಯ್ಕೆ ಮಾಡುತ್ತಾರೆ. ಎಲ್ಲಾ ಸ್ಥರಗಳ ಮತದಾರರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಇದರಲ್ಲಿ ನಗರ, ಗ್ರಾಮ, ವಿವಿಧ ವಯೋಮಾನ, ಆರ್ಥಿಕ ಸ್ಥಿತಿ ಮತ್ತು ಸಮುದಾಯಗಳ ಜನರು ಇರುವಂತೆ ಎಚ್ಚರ ವಹಿಸುತ್ತಾರೆ. ಅವರು ಯಾರಿಗೆ ಮತ ನೀಡಿದರು. ವಯಸ್ಸು, ಪ್ರದೇಶ ಮತ್ತು ಕುಟುಂಬದ ಆರ್ಥಿಕ ಪರಿಸ್ಥಿತಿಯ ಮಾಹಿತಿ ಸಂಗ್ರಹಿಸುತ್ತಾರೆ. ಇವುಗಳನ್ನು ಆಧರಿಸಿ ಸಂಸ್ಕರಿಸುತ್ತಾರೆ. ಮತಗಳ ಹಂಚಿಕೆಯನ್ನು ಗಮನಿಸುತ್ತಾರೆ. ಜಾತಿ, ಪ್ರದೇಶ, ಲಿಂಗ ಮತ್ತು ಹಿಂದಿನ ಚುನಾವಣೆಗಳಲ್ಲಿ ಮತದಾರರ ನಿರ್ಧಾರಗಳನ್ನು ಅಳೆದು ತೂಗಿ ಸಮೀಕ್ಷೆ ಸಿದ್ಧಪಡಿಸುತ್ತಾರೆ. 

ವಯಸ್ಸು ಮತ್ತು ಮತ ಚಲಾವಣೆ ಕುರಿತು ಕೆಲವೊಂದು ಮೂಲ ಪ್ರಶ್ನೆಗಳಿಗೆ ಉತ್ತರಿಸಬಯಸುವವರಿಂದ ಮಾಹಿತಿ ಸಂಗ್ರಹಿಸುತ್ತಾರೆ. ಇಲ್ಲಿ ಸಂಗ್ರಹವಾದ ಮಾಹಿತಿಯನ್ನು ದಾಖಲಿಸಲಾಗುತ್ತದೆ. ಇದರಲ್ಲಿ ಕ್ಷೇತ್ರ, ಅಲ್ಲಿನ ಮತದಾರರು ಇತರ ಅಂಶಗಳಿಗೆ ಸೂಕ್ತ ಪ್ರಾತಿನಿಧ್ಯ ನೀಡಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲಾಗುತ್ತದೆ. ವಯಸ್ಸಿನ ಆಧಾರದಲ್ಲಿ ಸಂಗ್ರಹಿಸಿದ ಮಾಹಿತಿಗೆ ಮೌಲ್ಯವನ್ನು ನಿರ್ಧರಿಸಲಾಗುತ್ತದೆ. ಇದನ್ನು ಆಧರಿಸಿ, ಯಾವ ಪಕ್ಷಕ್ಕೆ ಗೆಲುವು ಸಿಗಬಹುದು ಎಂಬುದನ್ನು ಪರಿಣಿತ ಸೆಫಾಲಜಿಸ್ಟ್‌ಗಳು ಲೆಕ್ಕ ಹಾಕುತ್ತಾರೆ. ಇಷ್ಟಿದ್ದರೂ ಎಲ್ಲಾ ಸಮೀಕ್ಷೆಗಳು ವಾಸ್ತವ ಫಲಿತಾಂಶಕ್ಕೆ ಹತ್ತಿರವಾಗಿರದು. ಹಿಂದಿನ ಚುನಾವಣೆಗಳ ಕೆಲ ಸಮೀಕ್ಷೆಗಳನ್ನು ಗಮನಿಸಿದರೆ ಒಂದಷ್ಟು ವ್ಯತ್ಯಾಸಗಳು ಕಂಡುಬಂದಿವೆ. ಬಹುತೇಕ ಸಮೀಕ್ಷೆಗಳು ಎಡವಿದ ಉದಾಹರಣೆಗಳೂ ಇವೆ. 


Prajavani 1 hour ago
Home Flash News