Select Location
All Locations
State
Region
City / District
ಇರಾನ್‌ಗೆ ಟ್ರಂಪ್ ಖಡಕ್ ಎಚ್ಚರಿಕೆ: ಇನ್ಮುಂದೆ ನಾನು ಒಳ್ಳೆಯವನಲ್ಲ, ಬೇಗ ಬುದ್ಧಿ ಕಲಿಯಿರಿ!

ಇರಾನ್‌ಗೆ ಟ್ರಂಪ್ ಖಡಕ್ ಎಚ್ಚರಿಕೆ: ಇನ್ಮುಂದೆ ನಾನು ಒಳ್ಳೆಯವನಲ್ಲ, ಬೇಗ ಬುದ್ಧಿ ಕಲಿಯಿರಿ!

ವಾಷಿಂಗ್ಟನ್: ಅಮೆರಿಕ ಮತ್ತು ಇರಾನ್ ನಡುವಿನ ರಾಜತಾಂತ್ರಿಕ ಸಂಘರ್ಷ ಈಗ ಮತ್ತೊಂದು ಹಂತಕ್ಕೆ ತಲುಪಿದೆ. ಇರಾನ್ ವಿರುದ್ಧ ಕೆಂಡ ಕಾರಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಆ ದೇಶಕ್ಕೆ ಅಂತಿಮ ಎಚ್ಚರಿಕೆ ನೀಡಿದ್ದಾರೆ. "ಇನ್ಮುಂದೆ ಇರಾನ್ ಎದುರಿಸುತ್ತಿರುವುದು ಒಬ್ಬ ಒಳ್ಳೆಯ ವ್ಯಕ್ತಿಯನ್ನಲ್ಲ (No more Mr. Nice Guy). ಇರಾನ್ ತನ್ನ ಹಠಮಾರಿತನ ಬಿಟ್ಟು ಕೂಡಲೇ ಬುದ್ಧಿ ಕಲಿಯುವುದು ಒಳ್ಳೆಯದು" ಎಂದು ಟ್ರಂಪ್ ಗುಡುಗಿದ್ದಾರೆ. ತಮ್ಮದೇ ಸಾಮಾಜಿಕ ಜಾಲತಾಣವಾದ 'ಟ್ರೂತ್ ಸೋಶಿಯಲ್'ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ಅವರು, ಕೈಯಲ್ಲಿ ಅಸಾಲ್ಟ್ ರೈಫಲ್ ಹಿಡಿದಿರುವ ತಮ್ಮದೇ ಆದ ಎಡಿಟ್ ಮಾಡಿದ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಸಂಚಲನ ಸೃಷ್ಟಿಸಿದ್ದಾರೆ. ಇರಾನ್ ದೇಶವು ಪ್ರಸ್ತುತ ಆಂತರಿಕವಾಗಿ ಕುಸಿಯುವ ಹಂತದಲ್ಲಿದೆ ಎಂದು ಟ್ರಂಪ್ ಅಭಿಪ್ರಾಯಪಟ್ಟಿದ್ದಾರೆ. 

ಆ ದೇಶಕ್ಕೆ ಅಣ್ವಸ್ತ್ರ ರಹಿತ ಒಪ್ಪಂದಕ್ಕೆ ಸಹಿ ಹಾಕಲು ತಿಳಿಯುತ್ತಿಲ್ಲ, ಮೊದಲು ಅವರು ತಮ್ಮ ಆಡಳಿತ ವ್ಯವಸ್ಥೆಯನ್ನು ಸರಿಪಡಿಸಿಕೊಳ್ಳಲಿ ಎಂದು ವ್ಯಂಗ್ಯವಾಡಿದ್ದಾರೆ. ಇರಾನ್ ಈಗ ನಾಯಕತ್ವದ ಬಿಕ್ಕಟ್ಟನ್ನು ಎದುರಿಸುತ್ತಿದ್ದು, ಹಾರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸುವಂತೆ ನಮ್ಮನ್ನು ವಿನಂತಿಸುತ್ತಿದೆ. ಆದರೆ ಅವರು ಸರಿಯಾದ ಯೋಜನೆಯೊಂದಿಗೆ ಬರುವವರೆಗೂ ಅಮೆರಿಕ ಮಣಿಯುವುದಿಲ್ಲ ಎಂಬ ಸಂದೇಶವನ್ನು ಟ್ರಂಪ್ ರವಾನಿಸಿದ್ದಾರೆ. ಇದೇ ವೇಳೆ, ಅಮೆರಿಕ ಮತ್ತು ಇರಾನ್ ನಡುವೆ ನಡೆಯಬೇಕಿದ್ದ ಶಾಂತಿ ಮಾತುಕತೆಗಳು ಈಗ ಅನಿಶ್ಚಿತತೆಗೆ ಸಿಲುಕಿವೆ. ಪಾಕಿಸ್ತಾನದಲ್ಲಿ ನಡೆಯಬೇಕಿದ್ದ ಈ ಮಾತುಕತೆಗೆ ಅಮೆರಿಕದ ನಿಯೋಗವನ್ನು ಕಳುಹಿಸಲು ಟ್ರಂಪ್ ನಿರಾಕರಿಸಿದ್ದಾರೆ. ಆರಂಭದಲ್ಲಿ ತಮ್ಮ ಪ್ರತಿನಿಧಿಗಳಾಗಿ ಸ್ಟೀವ್ ವಿಟ್ಕೋಫ್ ಮತ್ತು ಜಾರೆಡ್ ಕುಶ್ನರ್ ಅವರನ್ನು ಕಳುಹಿಸುವುದಾಗಿ ಹೇಳಿದ್ದ ಟ್ರಂಪ್, ನಂತರ ತಮ್ಮ ನಿರ್ಧಾರ ಬದಲಿಸಿದ್ದಾರೆ. "ಇರಾನ್ ಬಳಿ ಮಾತುಕತೆಗೆ ಯಾವುದೇ ಸರಿಯಾದ ಯೋಜನೆ ಇಲ್ಲ. ಯಾವುದೇ ತಯಾರಿ ಇಲ್ಲದ ಇಂತಹ ಮಾತುಕತೆಗಾಗಿ ಪಾಕಿಸ್ತಾನಕ್ಕೆ ಹೋಗುವುದು ಅನಗತ್ಯ ಖರ್ಚು" ಎಂದು ಟ್ರಂಪ್ ಮಾರ್ಮಿಕವಾಗಿ ನುಡಿದಿದ್ದಾರೆ.


Udayavani 1 hour ago
Home Flash News