Select Location
All Locations
State
Region
City / District
ಕಿಂಗ್ vs ಯುವರಾಜನ ಮುಖಾಮುಖಿ: ಗುಜರಾತ್ ವಿರುದ್ಧ ಹೇಗಿದೆ RCB ರೆಕಾರ್ಡ್?

ಕಿಂಗ್ vs ಯುವರಾಜನ ಮುಖಾಮುಖಿ: ಗುಜರಾತ್ ವಿರುದ್ಧ ಹೇಗಿದೆ RCB ರೆಕಾರ್ಡ್?

ಅಹಮದಾಬಾದ್: ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್ ಮೈದಾನದಲ್ಲಿ ಇಂದು (ಏಪ್ರಿಲ್ 30) ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ 19ನೇ ಆವೃತ್ತಿಯ 42ನೇ ಪಂದ್ಯದಲ್ಲಿ ಬಲಿಷ್ಠ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟನ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ. ಈ ಪಂದ್ಯದ ಆರಂಭಕ್ಕೂ ಮುನ್ನ ಕ್ರಿಕೆಟ್ ಅಭಿಮಾನಿಗಳು ಇದು ಕಿಂಗ್ vs ಯುವರಾಜನ ಕಾಳಗ ಎಂದು ಬಿಂಬಿಸುತ್ತಿದ್ದಾರೆ.

ಕ್ರಿಕೆಟ್ ಜಗತ್ತಿನ ಕಿಂಗ್ ಎಂದು ಗುರುತಿಸಿಕೊಂಡಿರುವ ವಿರಾಟ್ ಕೊಹ್ಲಿ ಅವರು ಅನೇಕ ದಾಖಲೆಗಳ ಜೊತೆಗೆ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಅದೇ ಹಾದಿಯಲ್ಲಿ ಸಾಗುತ್ತಿರುವ ಶುಭಮನ್ ಗಿಲ್ ಅವರನ್ನು ಕ್ರಿಕೆಟ್ ಅಭಿಮಾನಿಗಳು ಮುಂದಿನ ವಿರಾಟ್ ಕೊಹ್ಲಿ (ಯುವರಾಜ) ಎಂದು ಬಣ್ಣಿಸುತ್ತಿದ್ದಾರೆ. ಸದ್ಯ, ಭಾರತ ಏಕದಿನ ಹಾಗೂ ಟೆಸ್ಟ್ ತಂಡದ ನಾಯಕರಾಗಿರುವ ಅವರು. ಈ ಬಾರಿಯ ಐಪಿಎಲ್‌ನಲ್ಲಿಯೂ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ.

ಈ ಬಾರಿಯ ಐಪಿಎಲ್‌ನ ಬಲಿಷ್ಠ ತಂಡಗಳಲ್ಲಿ ಒಂದಾಗಿರುವ ಆರ್‌ಸಿಬಿ ತಂಡವು ಆಡಿರುವ 8 ಪಂದ್ಯಗಳಲ್ಲಿ 6 ಗೆಲುವು ಹಾಗೂ 2 ಸೋಲಿನೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಇನ್ನೂ ಬ್ಯಾಟಿಂಗ್, ಬೌಲಿಂಗ್ ಹಾಗೂ ಕ್ಷೇತ್ರ ರಕ್ಷಣೆ ಎಲ್ಲಾ ವಿಭಾಗದಲ್ಲಿಯೂ ಆರ್‌ಸಿಬಿ ಬಲಿಷ್ಠವಾಗಿ ಕಾಣಿಸುತ್ತಿದೆ. ತಂಡದಲ್ಲಿ, ಫಿಲ್ ಸಾಲ್ಟ್, ಬೆಥೆಲ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಟಿಮ್‌ ಡೇವಿಡ್‌, ದೇವದತ್ತ ಪಡಿಕ್ಕಲ್‌ರಂತಹ ತಾರಾ ಆಟಗಾರರಿದ್ದು, ಎಲ್ಲರೂ ಉತ್ತಮ ಲಯದಲ್ಲಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಜೋಶ್ ಹೇಜಲ್‌ವುಡ್, ಭುವನೇಶ್ವರ ಕುಮಾರ್ ಉತ್ತಮ ದಾಳಿ ನಡೆಸುತ್ತಿದ್ದಾರೆ. 

ಇವರಿಗೆ ಸುಯಾಶ್ ಶರ್ಮಾ, ಕೃನಾಲ್ ಪಾಂಡ್ಯ ಹಾಗೂ ರಸಿಕ್ ಸಲಾಂ ಧಾರ್ ಉತ್ತಮ ಸಾಥ್ ನೀಡುತ್ತಿದ್ದಾರೆ. ಆ ಮೂಲಕ ಆರ್‌ಸಿಬಿ ತಂಡ ಬಲಿಷ್ಠವಾಗಿ ಕಾಣಿಸುತ್ತಿದೆ. ಲಯಕ್ಕೆ ಮರಳುತ್ತಿದೆ ಗುರಾತ್ ಟೈಟನ್ಸ್ ಶುಭಮನ್ ಗಿಲ್ ನಾಯಕತ್ವದ ಗುಜರಾತ್ ಟೈಟನ್ಸ್ ತಂಡವು ಟೂರ್ನಿ ಆರಂಭದಲ್ಲಿ ಕಳಪೆ ಪ್ರದರ್ಶನ ತೋರಿತ್ತು. ಆದರೆ, ಗೆಲುವಿನ ಹಳಿಗೆ ಮರಳಿರುವ ತಂಡವು 8 ಪಂದ್ಯಗಳಲ್ಲಿ 4 ಗೆಲುವು ಹಾಗೂ ಅಷ್ಟೇ ಸೋಲುಗಳೊಂದಿಗೆ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ಕಳೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಗೆಲುವು ಗುಜರಾತ್ ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ. ಶುಭಮನ್ ಗಿಲ್, ಸಾಯಿ ಸುದರ್ಶನ್, ಜಾಸ್ ಬಟ್ಲರ್ ತಂಡದ ಬ್ಯಾಟಿಂಗ್ ವಿಭಾಗಕ್ಕೆ ಶಕ್ತಿ ನೀಡುತ್ತಿದ್ದಾರೆ.

ಈ ಮೂವರು ಕೂಡ ಉತ್ತಮ ಲಯದಲ್ಲಿದ್ದಾರೆ. ಬ್ಯಾಟಿಂಗ್ ಹೋಲಿಸಿದರೆ, ಗುಜರಾತ್ ತಂಡದ ಬೌಲಿಂಗ್ ವಿಭಾಗವೇ ಬಲಿಷ್ಠವಾಗಿದೆ. ಕಗಿಸೊ ರಬಾಡ, ಮೊಹಮ್ಮದ್ ಸಿರಾಜ್, ಪ್ರಸಿದ್ಧ ಕೃಷ್ಣ, ರಶೀದ್ ಖಾನ್‌ರಂತಹ ಅನುಭವಿ ಬೌಲರ್‌ಗಳು ತಂಡದಲ್ಲಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಉಭಯ ತಂಡಗಳು 7 ಬಾರಿ ಮುಖಾಮುಖಿಯಾಗಿದ್ದು, ಇದರಲ್ಲಿ ಆರ್‌ಸಿಬಿ 4 ಪಂದ್ಯಗಳನ್ನು ಗೆದ್ದರೆ, ಗುಜರಾತ್ ಟೈಟನ್ಸ್ 3 ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ. ಉಭಯ ತಂಡಗಳ ಕೊನೆಯ ಮುಖಾಮುಖಿಯಲ್ಲಿ ಆರ್‌ಸಿಬಿ ತಂಡವು ಗುಜರಾತ್ ನೀಡಿದ್ದ 206 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿ ಗೆಲುವು ದಾಖಲಿಸಿತ್ತು.


Prajavani 3 days ago
Home Flash News