Select Location
All Locations
State
Region
City / District
ಅಭಿವೃದ್ಧಿಯೋ.. ವಿನಾಶವೋ.. ಏನಿದು ನಿಕೋಬಾರ್ ಯೋಜನೆ? ವಿರೋಧವೇಕೆ? ಸಮರ್ಥನೆಗಳೇನು?

ಅಭಿವೃದ್ಧಿಯೋ.. ವಿನಾಶವೋ.. ಏನಿದು ನಿಕೋಬಾರ್ ಯೋಜನೆ? ವಿರೋಧವೇಕೆ? ಸಮರ್ಥನೆಗಳೇನು?

'ನಾನು ನಿಕೊಬಾರ್ ಅರಣ್ಯ ಪ್ರದೇಶದಲ್ಲಿದ್ದೇನೆ. ಜೀವಿತಾವಧಿಯಲ್ಲೇ ನಾ ನೋಡಿದ ಅತ್ಯಂತ ಸುಂದರ ಅರಣ್ಯ. ಸಾವಿರಾರು ಎಕರೆ ಮಳೆ ಕಾಡು ಇದು. ಇಲ್ಲಿರುವ ಲಕ್ಷಾಂತರ ಮರಗಳನ್ನು ಕಡಿಯಲಾಗುತ್ತದೆ. ಅದು ಕೇವಲ ಒಬ್ಬ ಉದ್ಯಮಿಯ ಬಯಕೆಯನ್ನು ಈಡೇರಿಸುವುದಕ್ಕಾಗಿ. ಬುಡಕಟ್ಟು ಜನರ ಜೀವನ, ಪರಿಸರ ವ್ಯವಸ್ಥೆಯೇ ಧೂಳಿಪಟವಾಗಲಿದೆ. ಈ ದ್ವೀಪದಲ್ಲಿ ಸಾಕಷ್ಟು ಬುಡಕಟ್ಟು ಪಂಗಡಗಳು ಇಲ್ಲಿವೆ. ಯಾರೊಬ್ಬರೂ, ಈ ಯೋಜನೆಗಾಗಿ ಕೇಳಿಲ್ಲ. ಪ್ರತಿಯೊಬ್ಬರೂ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಏನು ಪರಿಹಾರ ಸಿಗಲಿದೆ ಎಂಬುದು ಕೂಡ ಇಲ್ಲಿನ ಯಾರಿಗೂ ಗೊತ್ತಿಲ್ಲ. ಇಲ್ಲಿನ ಒಂದೊಂದು ಮರವೂ ಲಕ್ಷಾಂತರ ರೂಪಾಯಿ ಬೆಲೆ ಬಾಳುತ್ತವೆ. ನಾನೀಗ, ಕಾಡಿನ ಒಂದು ಭಾಗದಲ್ಲಿದ್ದೇನೆ ಅಷ್ಟೇ. ಒಳಗೆ ಪ್ರವೇಶಿಸುವುದೂ ಕಷ್ಟವಾಗುವಷ್ಟು ದಟ್ಟವಾದ ಅರಣ್ಯವಿದು. 

ಸರ್ಕಾರ ಇಲ್ಲಿಗೆ ಬರುತ್ತಿರುವುದಾದರೂ ಏಕೆ? ಗುಟ್ಟಾಗಿ ಇದನ್ನೆಲ್ಲ ಮಾಡಲಾಗುತ್ತಿದೆ. ಈ ಬಗ್ಗೆ ಸಂಸತ್ತಿನಲ್ಲಿ ಧ್ವನಿ ಎತ್ತುತ್ತೇನೆ. ಇಡೀ ದೇಶಕ್ಕೆ; ಅದರಲ್ಲೂ ಮುಖ್ಯವಾಗಿ ಯುವಜನರಿಗೆ ಇದರ ಬಗ್ಗೆ ತಿಳಿಸಬೇಕಾದ ಅಗತ್ಯವಿದೆ. ಏಕೆಂದರೆ ಇದು ನಿಮ್ಮ ಭವಿಷ್ಯ. ದೇಶದ ಅತಿದೊಡ್ಡ ಹಗರಣ ಹಾಗೂ ಪರಿಸರ ವ್ಯವಸ್ಥೆಯ ಅತಿದೊಡ್ಡ ಕಳ್ಳತನ ಇದಾಗಲಿದೆ' ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು, ನಿಕೋಬಾರ್‌ ದ್ವೀಪದ ಅರಣ್ಯ ಪ್ರದೇಶಕ್ಕೆ ಇತ್ತೀಚೆಗೆ ಭೇಟಿ ನೀಡಿದ್ದ ವೇಳೆ ಹೇಳಿರುವ ಮಾತಿದು. ಅವರ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಕೇಂದ್ರ ಸರ್ಕಾರದ ಉದ್ದೇಶಿತ 'ನಿಕೋಬಾರ್‌ ಪ್ರಾಜೆಕ್ಟ್‌' ಕುರಿತು ಚರ್ಚೆ ಹುಟ್ಟುಹಾಕಿದೆ. ಏನಿದು ನಿಕೋಬಾರ್‌ ಪ್ರಾಜೆಕ್ಟ್‌? ಸರ್ಕಾರ ಹೇಳುವುದೇನು? ಗ್ರೇಟ್‌ ನಿಕೋಬಾರ್‌ನ ಗಲಾಥಿಯಾ ಕೊಲ್ಲಿ ಸಮೀಪ, ಈ ಯೋಜನೆಯನ್ನು ಆರಂಭಿಸಲು ಉದ್ದೇಶಿಸಲಾಗಿದ್ದು, ₹ 72,000 ಕೋಟಿಯಿಂದ ₹ 92,000 ಕೋಟಿವರೆಗೆ ಅಂದಾಜು ವೆಚ್ಚ ಆಗಲಿದೆ ಎನ್ನಲಾಗುತ್ತಿದೆ.

ಈ ದ್ವೀಪವನ್ನು ಹಡಗು ಸಂಚಾರ ಹಾಗೂ ಕಾರ್ಯತಂತ್ರದ ಪ್ರಮುಖ ಕೇಂದ್ರವಾಗಿ ಪರಿವರ್ತಿಸುವ ಗುರಿ ಹಾಕಿಕೊಳ್ಳಲಾಗಿದೆ. ಸರಕು ಸಾಗಣೆ ಬಂದರು, ಪಟ್ಟಣ, ಗ್ಯಾಸ್‌ & ಸೋಲಾರ್‌ ಪವರ್‌ ಘಟಕ, ನಾಗರಿಕ & ಸೇನಾ ವಿಮಾನ ನಿಲ್ದಾಣ ಸೇರಿದಂತೆ ಹಲವು ಮೂಲಸೌಕರ್ಯಗಳು ಇಲ್ಲಿ ನಿರ್ಮಾಣಗೊಳ್ಳಲಿವೆ. ದೇಶದ ಆರ್ಥಿಕತೆ ಹಾಗೂ ಕಾರ್ಯತಂತ್ರಗಳ ಹಿತಾಸಕ್ತಿಯ ದೃಷ್ಟಿಯಿಂದ ಈ ಯೋಜನೆಯು ಅತ್ಯಗತ್ಯವಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ವಿಶ್ವದಲ್ಲೇ ಅತಿಹೆಚ್ಚು ಹಡಗು ಸಂಚಾರವಿರುವ ಜಲಸಂಧಿಗಳಲ್ಲಿ ಒಂದಾದ ಮಲಕ್ಕಾ ಬಳಿಯೇ ಈ ದ್ವೀಪವಿದೆ. ದೇಶದ ಸರಕು ಸಾಗಣೆಯಲ್ಲಿ ಹೆಚ್ಚಿನ ಭಾಗವು ಕೊಲೊಂಬೊದಂತಹ ವಿದೇಶಿ ಬಂದರುಗಳ ಮೂಲಕವೇ ನಡೆಯುತ್ತಿದೆ. ಹೊಸ ಬಂದರಿನ ನಿರ್ಮಾಣವು ವಿದೇಶಗಳ ಮೇಲಿನ ಅವಲಂಬನೆಯನ್ನು ತಗ್ಗಿಸಲು, ರಾಷ್ಟ್ರೀಯ ಭದ್ರತೆಯನ್ನು ಬಲಗೊಳಿಸಲು ನೆರವಾಗಲಿದೆ. ಅಷ್ಟೇ ಅಲ್ಲ. ಈ ಅಭಿವೃದ್ಧಿ ಕಾರ್ಯದಂತೆ ಬರೋಬ್ಬರಿ 1.28 ಲಕ್ಷಕ್ಕೂ ಅಧಿಕ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಪ್ರತಿಪಾದಿಸಿದೆ.


Prajavani 1 hour ago
Home Flash News