IPL 2026: ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಮರುಪರಿಶೀಲನೆ!
ಐಪಿಎಲ್ 2026ರ ನಂತರ ‘ಇಂಪ್ಯಾಕ್ಟ್ ಪ್ಲೇಯರ್’ ನಿಯಮಕ್ಕೆ ಕೊನೆ ಹಾಡಲಾಗುತ್ತದೆಯೇ? ಈ ಪ್ರಶ್ನೆಗೆ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಉತ್ತರ ನೀಡಿದ್ದಾರೆ. ಸದ್ಯದ ಕ್ರಿಕೆಟ್ ವೇಗಕ್ಕೆ ಹೊಸ ಆಯಾಮ ನೀಡಿರುವ ಈ ನಿಯಮದ ಪರ-ವಿರೋಧ ಚರ್ಚೆಗಳ ನಡುವೆ, ಮಂಡಳಿಯ ಮುಂದಿನ ನಡೆಯೇನು ಎಂಬುದು ಈಗ ಎಲ್ಲರ ಗಮನ ಸೆಳೆದಿದೆ. ಏಕೆಂದರೆ ಈ ನಿಯಮವನ್ನು ಮರುಪರಿಶೀಲಿಸುವುದಾಗಿ ಬಿಸಿಸಿಐ ಕಡೆಯಿಂದ ಅಧಿಕೃತ ಹೇಳಿಕೆ ಹೊರಬಿದ್ದಿದೆ. ಈ ಕುರಿತು ಬಿಸಿಸಿಐನಿಂದ ಸಿಕ್ಕಿರುವ ಮಾಹಿತಿ ಈ ಕೆಳಗಿನಂತಿದೆ…
ಬಿಸಿಸಿಐ ಮುಂದಿನ ನಡೆ: 2026ರ ಸೀಸನ್ ಮುಗಿದ ನಂತರ, ಬಿಸಿಸಿಐ ಪದಾಧಿಕಾರಿಗಳು, ತಂಡದ ಮಾಲೀಕರು ಮತ್ತು ತಜ್ಞರೊಂದಿಗೆ ಸಭೆ ನಡೆಸಿ ಈ ನಿಯಮವನ್ನು ಮುಂದಿನ 2027ರ ಸೀಸನ್‌ನಲ್ಲಿ ಮುಂದುವರಿಸಬೇಕೇ ಅಥವಾ ಬೇಡವೇ ಎಂಬುದನ್ನು ನಿರ್ಧರಿಸಲಿದ್ದಾರೆ. ಅಂದರೆ ಈ ಬಾರಿಯ ಐಪಿಎಲ್ ಬಳಿಕ ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಭವಿಷ್ಯ ನಿರ್ಧಾರವಾಗಲಿದೆ. ಈ ನಿಒಯಮವನ್ನು ತೆಗೆದು ಹಾಕಿದರೆ, ಆಡುವ ಬಳಗದಲ್ಲಿ 11 ಆಟಗಾರರು ಮಾತ್ರ ಕಾಣಿಸಿಕೊಳ್ಳಲಿದ್ದಾರೆ.
ಪ್ರಸ್ತುತ ಇಂಪ್ಯಾಕ್ಟ್ ಪ್ಲೇಯರ್ ನಿಯಮದಡಿ ಒಟ್ಟು 12 ಆಟಗಾರರಿಗೆ ಅವಕಾಶ ಸಿಗುತ್ತಿದೆ. ಅಂದರೆ 11+1 ಆಟಗಾರರನ್ನು ಕಣಕ್ಕಿಳಿಸಲಾಗುತ್ತಿದೆ. ಇದೀಗ ಈ ನಿಯಮವನ್ನು ಮರುಪರಿಶೀಲಿಸುವುದಾಗಿ ಬಿಸಿಸಿಐ ತಿಳಿಸಿರುವ ಕಾರಣ ಐಪಿಎಲ್ 2027 ರಿಂದ ಇಂಪ್ಯಾಕ್ಟ್ ಪ್ಲೇಯರ್ ನಿಯಮವನ್ನು ತೆಗೆದು ಹಾಕುವ ಸಾಧ್ಯತೆಯಿದೆ.