ಮಹಿಳೆಯರು, ಮಕ್ಕಳಿಗೆ ದೆಹಲಿ ಅಸುರಕ್ಷಿತ ನಗರ: ಎನ್‌ಸಿಆರ್‌ಬಿ ವರದಿ
ನವದೆಹಲಿ: ರಾಷ್ಟ್ರ ರಾಜಧಾನಿ 'ದೆಹಲಿ' ದೇಶದ ಅತ್ಯಂತ ಅಸುರಕ್ಷಿತ ನಗರ ಎಂಬ ಹಣೆಪಟ್ಟಿ ಹೊತ್ತುಕೊಂಡಿದೆ. ಮಹಿಳೆಯರು, ಮಕ್ಕಳು ಮತ್ತು ವೃದ್ಧರಿಗೆ ಇದು ಸುರಕ್ಷಿತ ನಗರವಲ್ಲ ಎಂದು ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ (ಎನ್‌ಸಿಆರ್‌ಬಿ) ಬಿಡುಗಡೆ ಮಾಡಿರುವ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಎನ್‌ಸಿಆರ್‌ಬಿ ಹೊಸದಾಗಿ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, 2024ರಲ್ಲಿ ಮಹಿಳೆಯರ ವಿರುದ್ಧ 13,396 ಅಪರಾಧ ಪ್ರಕರಣಗಳು ದಾಖಲಾಗಿವೆ. ಇದು ದೇಶದ 19 ಮಹಾನಗರಗಳಲ್ಲೇ (metro cities) ಅತಿ ಹೆಚ್ಚು. ಇದರಲ್ಲಿ 1,058 ಅತ್ಯಾಚಾರ ಮತ್ತು 3,974 ಅಪಹರಣ ಪ್ರಕರಣಗಳು ಸೇರಿವೆ. ಹಿರಿಯ ನಾಗರಿಕರ ವಿರುದ್ಧದ 1,267 ಪ್ರಕರಣಗಳು ದಾಖಲಾಗಿವೆ.
ಮಕ್ಕಳ ವಿರುದ್ಧದ ಅಪರಾಧ: ದೆಹಲಿಯಲ್ಲಿ ಮಕ್ಕಳ ವಿರುದ್ಧದ 7,662 ಅಪರಾಧ ಪ್ರಕರಣಗಳು ದಾಖಲಾಗಿವೆ. ವಿಪರ್ಯಾಸವೆಂದರೆ, ಮಕ್ಕಳೇ ಎಸಗಿದ ಅಪರಾಧಗಳಲ್ಲೂ (2,306 ಪ್ರಕರಣಗಳು) ದೆಹಲಿ ಅಗ್ರಸ್ಥಾನದಲ್ಲಿದೆ. ಕಳ್ಳತನದ ರಾಜಧಾನಿ: ದೆಹಲಿಯಲ್ಲಿ 1,80,973 ಕಳ್ಳತನದ ಪ್ರಕರಣಗಳು ದಾಖಲಾಗಿದ್ದು, ಸರಾಸರಿ ದಿನಕ್ಕೆ 497 ಪ್ರಕರಣಗಳು ದಾಖಲಾಗುವುದರೊಂದಿಗೆ ದೆಹಲಿ ಭಾರತದ 'ಕಳ್ಳತನದ ರಾಜಧಾನಿ' ಎಂಬ ಕುಖ್ಯಾತಿ ಪಡೆದಿದೆ. ಎನ್‌ಸಿಆರ್‌ಬಿ 2024ರ ದತ್ತಾಂಶದ ಪ್ರಕಾರ, ರಾಜಧಾನಿಯಲ್ಲಿ ಮಹಿಳೆಯರ ಅಪಹರಣ, ಅತ್ಯಾಚಾರ ಮತ್ತು ವರದಕ್ಷಿಣೆ ಸಾವು ಪ್ರಕರಣಗಳು ಸಹ ಕಳವಳಕಾರಿಯಾಗಿವೆ. 1,058 ಅತ್ಯಾಚಾರ ಮತ್ತು 3,974 ಅಪಹರಣ ಪ್ರಕರಣಗಳು ದಾಖಲಾಗಿವೆ. ಕೊಲೆ ಪ್ರಕರಣ: 2023ರಲ್ಲಿ 506 ಕೊಲೆ ಪ್ರಕರಣಗಳು ದಾಖಲಾಗಿದ್ದವು.
2024ರಲ್ಲಿ ಇವುಗಳ ಸಂಖ್ಯೆ 504ಕ್ಕೆ ಇಳಿದಿವೆ. ಆದರೂ, ಕೊಲೆ ಪ್ರಕರಣಗಳ ಪ್ರಮಾಣ (ಲಕ್ಷಕ್ಕೆ 2.3) ರಾಷ್ಟ್ರೀಯ ಸರಾಸರಿಗಿಂತ (1.9) ಹೆಚ್ಚಿದೆ. ಅಪರಾಧ ಪ್ರಮಾಣ ಶೇ 6 ರಷ್ಟು ಇಳಿಕೆ: ಎನ್‌ಸಿಆರ್‌ಬಿ ದತ್ತಾಂಶದ ಪ್ರಕಾರ, ಭಾರತದಾದ್ಯಂತ ಒಟ್ಟಾರೆ ಅಪರಾಧ ಪ್ರಕರಣಗಳಲ್ಲಿ ಶೇ 6ರಷ್ಟು ಇಳಿಕೆ ಕಂಡುಬಂದಿದೆ. ಒಟ್ಟು ಪ್ರಕರಣಗಳು: 2023ರಲ್ಲಿ 62.41 ಲಕ್ಷ ಪ್ರಕರಣಗಳಿದ್ದರೆ, 2024ರಲ್ಲಿ 58.85 ಲಕ್ಷಕ್ಕೆ ಇಳಿಕೆಯಾಗಿದೆ. ಅಪರಾಧ ದರ: ಪ್ರತಿ ಲಕ್ಷ ಜನಸಂಖ್ಯೆಗೆ ದಾಖಲಾಗುವ ಪ್ರಕರಣಗಳ ಸಂಖ್ಯೆ 448.3 ರಿಂದ 418.9 ಕ್ಕೆ ಇಳಿಕೆಯಾಗಿದೆ. ದೇಶದಾದ್ಯಂತ ಅಪರಾಧ ಪ್ರಕರಣಗಳು ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದ್ದರೂ, ದೆಹಲಿ ಮಾತ್ರ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಯ ವಿಷಯದಲ್ಲಿ ಈಗಲೂ ಅಪಾಯಕಾರಿ ನಗರವಾಗಿಯೇ ಉಳಿದಿದೆ ಎಂದೂ ವರದಿಯಲ್ಲಿ ಹೇಳಲಾಗಿದೆ.