ಕೋಟೆನಾಡಲ್ಲಿ BSY ‘ಅಭಿಮಾನೋತ್ಸವ’ದ ಅಬ್ಬರ.. ಅಮಿತ್ ಶಾ ಭಾಗಿ, 10 ಲಕ್ಷ ಜನರ ಸಮಾಗಮಕ್ಕೆ ಸಾಕ್ಷಿಯಾಗಲಿದೆ ಉತ್ಸವ!
ಚಿತ್ರದುರ್ಗ: ಕರ್ನಾಟಕ ರಾಜಕಾರಣದ ‘ಧ್ರುವತಾರೆ’, ರಾಜಾಹುಲಿ ಬಿ.ಎಸ್. ಯಡಿಯೂರಪ್ಪ ಅವರು ಸಾರ್ವಜನಿಕ ಜೀವನದಲ್ಲಿ 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಇಂದು ಚಿತ್ರದುರ್ಗದ ಐತಿಹಾಸಿಕ ಮಣ್ಣಿನಲ್ಲಿ ಬೃಹತ್ ‘ಅಭಿಮಾನೋತ್ಸವ’ ಆಯೋಜಿಸಲಾಗಿದೆ. ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸುತ್ತಿದ್ದು, ಇಡೀ ಕೋಟೆನಾಡು ಕೇಸರಿಮಯವಾಗಿದೆ.
ಯಡಿಯೂರಪ್ಪ ಅವರ ಅಭಿಮಾನೋತ್ಸವದ ಪ್ರಯುಕ್ತ ಚಿತ್ರದುರ್ಗ ನಗರವನ್ನು ನವ ವಧುವಿನಂತೆ ಶೃಂಗರಿಸಲಾಗಿದೆ. ನಗರದಾದ್ಯಂತ ಬಿಎಸ್ ವೈ ಅವರ ಬೃಹತ್ ಕಟೌಟ್, ಪ್ಲೆಕ್ಸ್ ಮತ್ತು ಬ್ಯಾನರ್‌ಗಳು ರಾರಾಜಿಸುತ್ತಿವೆ. ಬಿಳಿ ಮತ್ತು ಕೇಸರಿ ಬಣ್ಣದ ಬಾವುಟಗಳು ರಸ್ತೆ ರಸ್ತೆಗಳಲ್ಲಿ ಆಕರ್ಷಣೆಯ ಕೇಂದ್ರಬಿಂದುವಾಗಿವೆ. ಈಗಾಗಲೇ ನಿನ್ನೆ ಸಂಜೆಯೇ ಯಡಿಯೂರಪ್ಪ ಅವರು ಚಿತ್ರದುರ್ಗಕ್ಕೆ ಆಗಮಿಸಿದ್ದು, ಕಾರ್ಯಕರ್ತರಲ್ಲಿ ಸಂಭ್ರಮ ಮನೆಮಾಡಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಂದು ಮಧ್ಯಾಹ್ನ ಈ ಬೃಹತ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮಧ್ಯಾಹ್ನ 3:15 ಅಮಿತ್ ಶಾ ಅವರು ವಿಮಾನದ ಮೂಲಕ DRDO ತಲುಪಲಿದ್ದಾರೆ. ಚಿತ್ರದುರ್ಗದಲ್ಲಿ ಬಿಎಸ್ ವೈ ಅವರಿಗೆ ಅಭಿನಂದನೆ ಸಲ್ಲಿಸಿ, ಅಮಿತ್ ಶಾ ಅವರು ವಿಶೇಷವಾಗಿ ಸನ್ಮಾನಿಸಲಿದ್ದಾರೆ.
ಮಾದಾರ ಚೆನ್ನಯ್ಯ ಪೀಠದ ಹಿಂಭಾಗದಲ್ಲಿರುವ 50 ಎಕರೆ ವಿಸ್ತೀರ್ಣದ ಬೃಹತ್ ಮೈದಾನದಲ್ಲಿ ಕಾರ್ಯಕ್ರಮ ನಡೆಯುತ್ತಿದೆ. ಸುಮಾರು 200 ಅಡಿ ಉದ್ದ ಮತ್ತು 40 ಅಡಿ ಅಗಲದ ಬೃಹತ್ ವೇದಿಕೆ ನಿರ್ಮಿಸಲಾಗಿದೆ. ವಿಶೇಷವೆಂದರೆ ಚಿತ್ರದುರ್ಗದ ಕಲ್ಲಿನ ಕೋಟೆಯನ್ನು ನೆನಪಿಸುವಂತಹ ಮಾದರಿಯಲ್ಲೇ ‘ಜರ್ಮನ್ ಪೆಂಡಾಲ್’ ಸಿದ್ಧಪಡಿಸಲಾಗಿದೆ. ವೇದಿಕೆಯ ಮೇಲೆ ಯಡಿಯೂರಪ್ಪ ಅವರು ಹಿಂದೆ ಬಳಸುತ್ತಿದ್ದ ಐತಿಹಾಸಿಕ ‘ಅಂಬಾಸಿಡರ್ ಕಾರ್’ ಪ್ರದರ್ಶನ ಇರುವುದು ಅಭಿಮಾನಿಗಳ ವಿಶೇಷ ಆಕರ್ಷಣೆಯಾಗಿದೆ.
ರಾಜ್ಯದ ಮೂಲೆ ಮೂಲೆಗಳಿಂದ ಸುಮಾರು 10 ಲಕ್ಷಕ್ಕೂ ಅಧಿಕ ಅಭಿಮಾನಿಗಳು ಸೇರುವ ನಿರೀಕ್ಷೆಯಿದೆ. ಬಿಸಿಲಿನ ಝಳ ಹೆಚ್ಚಿರುವುದರಿಂದ ಅಭಿಮಾನಿಗಳಿಗೆ ತೊಂದರೆಯಾಗದಂತೆ ಹೈದರಾಬಾದ್‌ನಿಂದ ವಿಶೇಷ ‘ಮಿಸ್ಟ್ ಫ್ಯಾನ್’ (Mist Fans) ಮತ್ತು ಏರ್ ಕೂಲರ್‌ಗಳನ್ನು ಅಳವಡಿಸಲಾಗಿದೆ. ಬಂದವರಿಗೆ ಕುಡಿಯುವ ನೀರು, ಮಜ್ಜಿಗೆ ಹಾಗೂ ಬಾಳೆಹಣ್ಣಿನ ವ್ಯವಸ್ಥೆ ಮಾಡಲಾಗಿದೆ.