ಬಿಜೆಪಿ ಬಂಗಾಳದ ನಾಗರಿಕತೆಯ ಯುದ್ಧ ಗೆದ್ದಿದ್ದು ಹೇಗೆ?
‘ಬಂಗಾಳ ಇಂದು ಯೋಚಿಸುವುದನ್ನು ಭಾರತ ನಾಳೆ ಯೋಚಿಸುತ್ತದೆ’ ಎನ್ನುವ ಕಾಲವೊಂದಿತ್ತು. ಸ್ವಾತಂತ್ರ್ಯಪೂರ್ವದ ಬಂಗಾಳದ ಸಾಂಸ್ಕೃತಿಕ, ಬೌದ್ಧಿಕ ಸಾಮರ್ಥ್ಯದ ಕನ್ನಡಿಯಂತಿದೆ ಈ ಮಾತು. ಇರದೇ ಏನು ಹೇಳಿ? ರಾಮಕೃಷ್ಣ ಪರಮಹಂಸರು, ಸ್ವಾಮಿ ವಿವೇಕಾನಂದರು, ಮಹರ್ಷಿ ಅರಬಿಂದೋ, ರವೀಂದ್ರನಾಥ್ ಟ್ಯಾಗೋರ್, ಸುಭಾಷ್ ಚಂದ್ರ ಬೋಸ್, ರಾಸ್ ಬಿಹಾರಿ ಬೋಸ್, ಪರಮಹಂಸ ಯೋಗಾನಂದ, ಜಗದೀಶ್ ಚಂದ್ರ ಬೋಸ್, ಶ್ಯಾಮಪ್ರಸಾದ ಮುಖರ್ಜಿ.. ಹೀಗೆ ಖ್ಯಾತನಾಮ ಬಂಗಾಳಿಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.
ಭಾರತದ ಸ್ವಾತಂತ್ರ್ಯ ಹೋರಾಟದ ಕೇಂದ್ರಸ್ಥಾನ ಬಂಗಾಳವೇ ಆಗಿತ್ತು. ಬ್ರಿಟಿಷರು ಭಾರತ ಬಿಟ್ಟು ಹೋಗುವಲ್ಲಿ ನಿರ್ಣಾಯಕ ಪಾತ್ರ ನಿರ್ವಹಿಸಿದವರು ಬಂಗಾಳದ ಮಣ್ಣಿನಿಂದ ಬಂದ ಸುಭಾಷ್ ಚಂದ್ರ ಬೋಸ್. ಅಂತಹ ಬಂಗಾಳದ ಭಾಗ್ಯ ಸ್ವಾತಂತ್ರ್ಯಾನಂತರ ಹಿಮ್ಮುಖವಾಗಿ ಚಲಿಸಲಾರಂಭಿಸಿತು. ‘ಭಾರತ ಇಂದು ಸಾಧಿಸುವುದನ್ನು ಬಂಗಾಳ ನಾಳೆ-ನಾಡಿದ್ದಾದರೂ ಸಾಧಿಸಬಲ್ಲದೇ?’ ಎಂದು ಕೇಳಿಕೊಳ್ಳುವಂತಹ ಸ್ಥಿತಿಗೆ ರಾಜಕೀಯ ಪಕ್ಷಗಳು ತಂದು ನಿಲ್ಲಿಸಿದವು. ದುರಾಡಳಿತಕ್ಕೆ ನಲುಗಿದ ಬಂಗಾಳ ಬಂಗಾಳಿಗಳ ಬಗ್ಗೆ ಯೋಚಿಸುವಾಗ ಕನಿಕರವಾಗುತ್ತದೆ. ಸ್ವಾತಂತ್ರ್ಯಾನಂತರದ ಬರೋಬ್ಬರಿ 30 ವರ್ಷವನ್ನು ಕಾಂಗ್ರೆಸ್ (ಐಎನ್‌ಸಿ ಮತ್ತು ಬಂಗಾಳಿ ಕಾಂಗ್ರೆಸ್) ಕೈಗೆ ಕೊಟ್ಟು ಪೆಟ್ಟು ತಿಂದು, ನಂತರ 34 ವರ್ಷಗಳಷ್ಟು ಕಾಲ ಕಮ್ಯುನಿಸ್ಟರ ಕಪಿಮುಷ್ಟಿಯಲ್ಲಿ ಸಿಲುಕಿ ಹೈರಾಣಾಗಿ, ಕಡೆಗೆ ಮಮತಾ ಬ್ಯಾನರ್ಜಿಯ ತೃಣಮೂಲ ಕಾಂಗ್ರೆಸ್ ಪಕ್ಷದ ಕೈಗೆ ರಾಜ್ಯದ ಚುಕ್ಕಾಣಿಯನ್ನು ಕೊಟ್ಟು ಬೆಂಕಿಯಿಂದ ಬಾಣಲೆಗೆ ಬಿದ್ದ ದುಃಸ್ಥಿತಿ ಬಂಗಾಳಿಗಳದ್ದು.
ಕಮ್ಯುನಿಸ್ಟರ ಹಿಂಸಾಚಾರ, ಓಲೈಕೆಯ ರಾಜಕಾರಣವನ್ನು ವಿರೋಧಿಸುತ್ತಲೇ 2011ರಲ್ಲಿ ಅಧಿಕಾರಕ್ಕೇರಿದ ಮಮತಾ ನಂತರ ಅಳವಡಿಸಿಕೊಂಡಿದ್ದು ಮಾತ್ರ ಕಮ್ಯುನಿಸ್ಟರ ಹಿಂಸಾಚಾರ, ಓಲೈಕೆಯ ರಾಜಕಾರಣವನ್ನೇ. ಭಾರತದ ಉಳಿದ ರಾಜ್ಯಗಳ ಚುನಾವಣೆಗಳು ಆಡಳಿತ ವಿರೋಧಿ ಅಲೆ, ಪ್ರಣಾಳಿಕೆ, ಅಭಿವೃದ್ಧಿ ಕಾರ್ಯ ಇತ್ಯಾದಿಗಳ ಮೇಲೆ ನಡೆದರೆ ಬಂಗಾಳದಲ್ಲಿ ಹಾಗೆ ನಡೆಯುವ ಪರಿಸ್ಥಿತಿಯಿಲ್ಲ. ಟಿಎಂಸಿ ಪಕ್ಷದವರು ತಮಗೆ ಮತ ಹಾಕಿ ಎಂದು ಮತದಾರರಲ್ಲಿ ಬೇಡುವುದಿಲ್ಲ. ತಮಗೆ ಮತ ಹಾಕದಿದ್ದರೆ ನಿಮ್ಮನ್ನು ಉಳಿಸುವುದಿಲ್ಲ ಎನ್ನುತ್ತಾರೆ. ಕಮ್ಯುನಿಸ್ಟರ ಆಡಳಿತವಿದ್ದ ಕೇರಳ, ತ್ರಿಪುರಾದಲ್ಲೂ ಇದೇ ಪರಿಸ್ಥಿತಿಯಿತ್ತು. ತ್ರಿಪುರಾದಲ್ಲಿ ಬಿಜೆಪಿ ಆಡಳಿತ ಬಂದ ನಂತರ ಅಲ್ಲಿ ಪರಿಸ್ಥಿತಿ ಬದಲಾಯಿತು. ಕೇರಳದಲ್ಲಿ ಇದು ನಿಂತಿದ್ದು 2017ರಲ್ಲಿ ಬಿಜೆಪಿ ನಡೆಸಿದ ಜನಸುರಕ್ಷಾ ಯಾತ್ರೆಯ ನಂತರ. ಸೋಷಿಯಲ್ ಮೀಡಿಯಾ ಕಾಲದಲ್ಲಿ ಹಿಂಸಾಚಾರ ನಡೆಸಿ ಮುಚ್ಟಿಡುವುದು ಸುಲಭವಲ್ಲ ಎಂಬ ಕನಿಷ್ಠ ನಾಚಿಕೆ ಕೇರಳದ ಕಮ್ಯುನಿಸ್ಟರಿಗೆ ಬಂದಿತು. ಆದರೆ ಮಮತಾ ಬ್ಯಾನರ್ಜಿಯವರಿಗೆ ಯಾವುದೂ ಲೆಕ್ಕಕ್ಕಿರಲಿಲ್ಲ. ಇಂತಹ ರಾಜ್ಯದಲ್ಲಿ ಬದಲಾವಣೆ ಸುಲಭವಿರಲಿಲ್ಲ. ಆದರೆ ಕಾಲ ಎಲ್ಲದಕ್ಕೂ ದಾರಿ ಮಾಡಿಕೊಡುತ್ತದೆ.