8 ಗ್ರಾಂ ಚಿನ್ನ, 25 ಲಕ್ಷದ ವಿಮೆ, ರೇಷ್ಮೆ ಸೀರೆ; ವಿಜಯ್ ಭರವಸೆ ಈಡೇರಿಕೆಗೆ ಬೇಕು ವಾರ್ಷಿಕ ₹1 ಲಕ್ಷ ಕೋಟಿ!
ಚೆನ್ನೈ: ತಮಿಳುನಾಡಿನ ಮುಖ್ಯಮಂತ್ರಿಯಾಗಿ ವಿಜಯ್ ಅಧಿಕಾರಕ್ಕೇರಿದ ಬೆನ್ನಲ್ಲೇ, ಚುನಾವಣಾ ಪೂರ್ವದಲ್ಲಿ ಅವರು ಘೋಷಿಸಿದ್ದ ಭರವಸೆಗಳನ್ನು ಈಡೇರಿಸಲು ಸಾಧ್ಯವೇ ಎಂಬ ಚರ್ಚೆ ಎದ್ದಿದೆ. ಏಕೆಂದರೆ ಅವರ ಪ್ರಣಾಳಿಕೆಯಲ್ಲಿದ್ದ ಎಲ್ಲ ಯೋಜನೆಗಳನ್ನು ಜಾರಿಗೊಳಿಸಲು ವಾರ್ಷಿಕ 1 ಲಕ್ಷ ಕೋಟಿ ರು. ಬೇಕು! ವಿಜಯ್ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ಮಾಸಿಕ 2,500 ರು. ಸಹಾಯಧನ, ನಿರುದ್ಯೋಗಿ ಪದವೀಧರರಿಗೆ ತಿಂಗಳಿಗೆ 4,000 ರು., ಡಿಪ್ಲೋಮಾ ಹೊಂದಿರುವವರಿಗೆ ತಿಂಗಳಿಗೆ 2,500 ರು., ವರ್ಷಕ್ಕೆ 6 ಉಚಿತ ಎಲ್‌ಪಿಜಿ ಸಿಲಿಂಡರ್‌ಗಳು, ಶಾಲೆಗೆ ಹೋಗುವ ಹೆಣ್ಣಮಕ್ಕಳ ತಾಯಂದಿರಿಗೆ ವರ್ಷಕ್ಕೆ 15,000 ರು, ಮದುವೆಯಾಗುವ ಹೆಣ್ಣುಮಕ್ಕಳಿಗೆ 8 ಗ್ರಾಂ ಚಿನ್ನ ಮತ್ತು ರೇಷ್ಮೆ ಸೀರೆ, ಹುಟ್ಟುವ ಪ್ರತಿ ಮಗುವಿಗೆ 1 ಬಂಗಾರದ ಉಂಗುರ ಸೇರಿದಂತೆ ಹಲವು ಭರವಸೆಗಳನ್ನು ನೀಡಿದ್ದರು. ಈ ಪೈಕಿ ಈಗ 200 ಯುನಿಟ್ ಉಚಿತ ವಿದ್ಯುತ್, ಮಹಿಳಾ ಸುರಕ್ಷತೆಗಾಗಿ ವಿಶೇಷ ಪಡೆ ಸ್ಥಾಪನೆ ಹಾಗೂ ರಾಜ್ಯಾದ್ಯಂತ ಡ್ರಗ್ಸ್ ಕಳ್ಳಸಾಗಣೆ ತಡೆ ಘಟಕ ಸ್ಥಾಪನೆಗೆ ಮೊದಲ ದಿನ ಅಂಕಿತ ಹಾಕಿದ್ದಾರೆ.
₹1 ಲಕ್ಷ ಕೋಟಿ ಬೇಕು ಆರ್ಥಿಕ ತಜ್ಞರ ಅಂದಾಜಿನ ಪ್ರಕಾರ, ಈ ಭರವಸೆಗಳನ್ನು ಪೂರ್ಣವಾಗಿ ಜಾರಿಗೊಳಿಸಿದಲ್ಲಿ ರಾಜ್ಯಕ್ಕೆ ವಾರ್ಷಿಕ ಸುಮಾರು 1 ಲಕ್ಷ ಕೋಟಿ ರು. ವೆಚ್ಚವಾಗುವ ಸಾಧ್ಯತೆ ಇದೆ. ಇದು 2024-25ನೇ ಸಾಲಿನ ರಾಜ್ಯದ ಒಟ್ಟು ತೆರಿಗೆ ಆದಾಯವಾದ 2.1 ಲಕ್ಷ ಕೋಟಿ ರು.ಗಳ ಸುಮಾರು 50 ಪ್ರತಿಶತಕ್ಕೆ ಸಮನಾಗುತ್ತದೆ. 5 ವರ್ಷಗಳ ಅವಧಿಯಲ್ಲಿ ಈ ಯೋಜನೆಗಳಿಗೆ 4.5 ಲಕ್ಷ ಕೋಟಿ ರು.ಗೂ ಹೆಚ್ಚು ವೆಚ್ಚವಾಗುವ ಸಾಧ್ಯತೆ ಇದೆ. ಆರ್ಥಿಕ ತಜ್ಞರ ಎಚ್ಚರಿಕೆ ಮದ್ರಾಸ್ ಸ್ಕೂಲ್ ಆಫ್ ಎಕನಾಮಿಕ್ಸ್ ನಿರ್ದೇಶಕ ಎನ್.ಆರ್. ಭಾನುಮೂರ್ತಿ, ‘ಯೋಜನೆಗಳನ್ನು ಜಾರಿಗೊಳಿಸುವ ಮುನ್ನ ಕೆಲವು ಕ್ರಮಗಳನ್ನು ಅನುಸರಿಸುವುದು ಬಹಳ ಮುಖ್ಯ. ಮೊದಲು ಫಲಾನುಭವಿಗಳನ್ನು ಗುರುತಿಸಬೇಕು, ಈಗಿರುವ ಯೋಜನೆಗಳನ್ನು ಆಡಿಟ್ ಮಾಡಬೇಕು ಮತ್ತು ಖರ್ಚುಗಳನ್ನು ತರ್ಕಬದ್ಧಗೊಳಿಸಬೇಕು. ಹೊಸ ಯೋಜನೆಗಳು ಈಗಾಗಲೇ ಇರುವ ಯೋಜನೆಗಳೊಂದಿಗೆ ಡೂಪ್ಲಿಕೇಟ್ ಆಗುತ್ತಿವೆಯೇ ಎಂಬುದನ್ನು ಪರಿಶೀಲಿಸಬೇಕು. ಖರ್ಚುಗಳನ್ನು ತರ್ಕಬದ್ಧಗೊಳಿಸದಿದ್ದರೆ ರಾಜ್ಯದ ಬೊಕ್ಕಸಕ್ಕೆ ತೀವ್ರ ಒತ್ತಡ ಬೀಳಲಿದೆ’ ಎಂದು ಎಚ್ಚರಿಸಿದ್ದಾರೆ.
ಹಿರಿಯ ಆರ್ಥಿಕ ತಜ್ಞ ಮತ್ತು ಮದ್ರಾಸ್ ಸ್ಕೂಲ್ ಆಫ್ ಎಕಾನಾಮಿಕ್ಸ್ ಮಾಜಿ ನಿರ್ದೇಶಕ ಕೆ. ಷಣ್ಮುಗಂ, ‘ಈಗಾಗಲೇ ಮಧ್ಯಂತರ ಬಜೆಟ್ ಅನ್ನು ಸಾಲದ ಮಿತಿಯ ಒಳಗೆ ತಯಾರಿಸಲಾಗಿದೆ. ಹಣಕಾಸು ಆಯೋಗದ ನಿಯಮಗಳ ಪ್ರಕಾರ ರಾಜ್ಯದ ಆರ್ಥಿಕ ಕೊರತೆಯನ್ನು ಜಿಎಸ್‌ಡಿಪಿಯ ಸುಮಾರು ಶೇ.3ಕ್ಕೆ ಮಾತ್ರ ಇರಿಸಬಹುದು. ಇಲ್ಲಿ ಹೆಚ್ಚು ಬದಲಾವಣೆಗೆ ಅವಕಾಶವಿಲ್ಲ. ಪ್ರಸ್ತುತ ತಮಿಳುನಾಡಿನ ಆರ್ಥಿಕ ಕೊರತೆ ಶೇ.2.8-3 ನಡುವೆ ಇದೆ. ಇದರಿಂದಾಗಿ ಹೆಚ್ಚಿನ ಖರ್ಚು ಮಾಡಲು ಅವಕಾಶಗಳಿಲ್ಲ. ವಿಜಯ್ ಅವರ ಹೆಚ್ಚುವರಿ ಧನಸಹಾಯ ಯೋಜನೆಗಳಿಗೆ ಮಾತ್ರ ವರ್ಷಕ್ಕೆ 18,000 ರು.ಗಳಿಂದ 20,000 ಕೋಟಿ ರು.ಗೂ ಹೆಚ್ಚು ಹಣ ಬೇಕಾಗುತ್ತದೆ. ರಾಜ್ಯದ ಖರ್ಚಿನ ದೊಡ್ಡ ಭಾಗವು ಸರ್ಕಾರಿ ನೌಕರರ ವೇತನ, ಪೆನ್ಷನ್ ಮತ್ತು ಸಾಲದ ಬಡ್ಡಿಗೆ ಹೋಗುತ್ತದೆ. ಹೀಗಾಗಿ ಹೊಸ ಯೋಜನೆಗಳಿಂದ ರಾಜ್ಯದ ಸಾಲದ ಹೊರೆ ಇನ್ನಷ್ಟು ಹೆಚ್ಚಲಿದೆ’ ಎಂದು ಎಚ್ಚರಿಕೆ ನೀಡಿದ್ದಾರೆ.