ಕೇಳಿದ್ನೆ ಕೇಳ್ತಾರೆ ಅಂತ ಮಾತನಾಡದೇ ಎಸ್ಕೇಪ್!
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತವರು ಜಿಲ್ಲೆ ಮೈಸೂರಿಗೆ ಬಂದಾಗಲೆಲ್ಲ ಸಾಮಾನ್ಯವಾಗಿ ವಿಮಾನ ನಿಲ್ದಾಣದಲ್ಲಿ, ನಗರದಲ್ಲೇ ವಾಸ್ತವ್ಯ ಹೂಡಿದರೆ ಮರುದಿನ ಟಿ.ಕೆ.ಬಡಾವಣೆಯ ನಿವಾಸದೆದುರು ಮಾಧ್ಯಮದವರ ಜೊತೆ ಮಾತನಾಡುವುದು ಗ್ಯಾರಂಟಿ. ಅದೇ ರೀತಿ ಮೇ 6-7 ರಂದು ಮೈಸೂರಿಗೆ ಸಿದ್ದರಾಮಯ್ಯ ಅವರ ಪ್ರವಾಸ ಕಾರ್ಯಕ್ರಮ ಇತ್ತು. ಮೊದಲ ದಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದರು. ಅಲ್ಲಿ ಕೂಡ ‘ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಎರಡು ಸ್ಥಾನ ಗೆದ್ದಿರುವುದರಿಂದ ನಾಯಕತ್ವ ಬದಲಾವಣೆಗೆ ಫುಲ್‌ಸ್ಟಾಪ್ ಬೀಳುತ್ತಾ?’, ‘ಡೆಲ್ಲಿಗೆ ಯಾವಾಗ ಹೋಗ್ತೀರಾ?’, ‘ರಾಹುಲ್‌ಗಾಂಧಿ ಭೇಟಿ ಮಾಡ್ತೀರಾ?’ ಇವೇ ಮೊದಲಾದ ಪ್ರಶ್ನೆಗಳು ಬಂದವು. ಎಲ್ಲಕ್ಕೂ ಸಾವಧಾನವಾಗಿ ಉತ್ತರಿಸಿದ ಸಿದ್ದರಾಮಯ್ಯ ಅವರು, ‘ಹೈಕಮಾಂಡ್ ಹೇಳ್ದಂಗೆ ಕೇಳ್ತೀನಿ’ ಅಂಥ ಹೇಳಿದ್ರು. ಮತ್ತೆ ‘ಸರ್ಕಾರಕ್ಕೆ ಮೂರು ವರ್ಷ ಆಯ್ತು. ಇನ್ನೂ ಎರ಼ಡು ವರ್ಷ ನೀವೇ ಇರ್ತೀರಾ?’ ಎಂಬ ಪ್ರಶ್ನೆ ಬರುತ್ತಿದ್ದಂತೆ ‘ಏಯ್, ಎಷ್ಚು ಸಾರಿ ಕೇಳಿದ್ನೆ ಕೇಳ್ತೀರಾ? ಹೈಕಮಾಂಡ್ ಹೇಳ್ದಂಗೆ ಕೇಳ್ತೀನಿ ಅಂದ್ರು ಮತ್ತೆ ಅದ್ನೇ ಕೇಳ್ತೀರಾ?’ ಎಂದು ಎಗರಾಡಿದ್ದರು.
ಮರುದಿನ ಸಿಎಂ ನಿವಾಸದ ಬಳಿ ರಾಕೇಶ್ ಸಿದ್ದರಾಮಯ್ಯ ಸ್ಮರಣಾರ್ಥ ಎರಡು ಆ್ಯಂಬುಲೆನ್ಸ್‌ಗಳಿಗೆ ಚಾಲನೆ ನೀಡುವ ಕಾರ್ಯಕ್ರಮ ಇತ್ತು. ಹೀಗಾಗಿ ‘ಮಾತಿಗೆ ಸಿಕ್ತಾರೆ. ಏನಾದ್ರೂ ಮಾತನಾಡಬಹುದು’ ಎಂದು ಮಾಧ್ಯಮದವರು ಹೋಗಿದ್ರು. ಆದರೆ ಮನೆಯಿಂದ ಹೊರಗೆ ಬಂದ ಸಿದ್ದರಾಮಯ್ಯ ಅವರು ಜನರಿಂದ ಅಹವಾಲು ಸ್ವೀಕರಿಸಿ, ತುರ್ತು ಚಿಕಿತ್ಸಾ ವಾಹನಗಳಿಗೆ ಹಸಿರು ಬಾವುಟ ತೋರಿಸಿ, ಚಾಲನೆ ನೀಡಿ, ಮಾಧ್ಯಮದವರು ‘ಸಾರ್, ಸಾರ್...’ ಎಂದು ಕೂಗಿಕೊಳ್ಳುತ್ತಿದ್ದರೂ ‘ರೆಡ್ ಸಿಗ್ನಲ್’ ತೋರಿಸಿ, ಕಾರನ್ನೇರಿ ತಮ್ಮ ಮೆಚ್ಚಿನ ಮೈಲಾರಿ ಹೋಟೆಲ್‌ಗೆ ತೆರಳಿ, ದೋಸೆ ಮೆಲ್ಲುತ್ತಿದ್ದರು!. ಬಹುಶಃ ಕೇಳಿದ್ನೆ ಕೇಳ್ತಾರೆ ಅಂತಿರಬೇಕು ಎಂದು ಮಾಧ್ಯಮದವರು ತಮ್ಮತಮ್ಮಲ್ಲೇ ಗುಸುಗುಸು ಮಾತನಾಡಿಕೊಂಡರು!