ತಮಿಳುನಾಡು ವಿಧಾನಸಭೆಯಲ್ಲಿ ಪ್ರಮಾಣವಚನ ಸ್ವೀಕರಿಸದ ನೂತನ ಸಚಿವೆ: ಕಾರಣ ಇಲ್ಲಿದೆ
ಚೆನ್ನೈ: ಚುನಾವಣಾ ಪ್ರಮಾಣಪತ್ರ ಸಲ್ಲಿಸಲು ವಿಫಲರಾದ ಕಾರಣ ತಮಿಳುನಾಡು ಸರ್ಕಾರದ ನೂತನ ಸಚಿವೆ ಎಸ್. ಕೀರ್ತನಾ ಅವರು ವಿಧಾನಸಭೆಯಲ್ಲಿ ಶಾಸಕಿಯಾಗಿ ಸೋಮವಾರ(ಮೇ 11) ಪ್ರಮಾಣವಚನ ಸ್ವೀಕರಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶಾಸಕರಾಗಿ ಪ್ರಮಾಣವಚನ ಸ್ವೀಕರಿಸಲು ಚುನಾವಣಾ ಪ್ರಮಾಣಪತ್ರವನ್ನು ಸಲ್ಲಿಸುವುದು ಕಡ್ಡಾಯವಾಗಿದೆ. ವಿಧಾನಸಭೆ ಪ್ರಧಾನ ಕಾರ್ಯದರ್ಶಿ ಕೆ. ಶ್ರೀನಿವಾಸನ್ ಅವರ ಸಮ್ಮುಖದಲ್ಲಿ ನೂತನ ಶಾಸಕರು ಪ್ರಮಾಣವಚನ ಸ್ವೀಕರಿಸುವ ವೇಳೆ ಕೀರ್ತನಾ ಅವರು ಕೂಡ ವೇದಿಕೆಗೆ ತೆರಳಿದ್ದಾರೆ. ಈ ವೇಳೆ ಚುನಾವಣಾ ಪ್ರಮಾಣಪತ್ರದ ಕುರಿತು ಶ್ರೀನಿವಾಸನ್ ಅವರು ಪ್ರಶ್ನಿಸಿದ್ದಾರೆ. ವಿಧಾನಸಭೆಯ ಕಲಾಪಗಳ ನೇರ ಪ್ರಸಾರದಲ್ಲಿ ಇದನ್ನು ಕಾಣಬಹುದಾಗಿದೆ. ಕೀರ್ತನಾ ಅವರು ಚುನಾವಣಾ ಪ್ರಮಾಣಪತ್ರ ಸಲ್ಲಿಸಲು ವಿಫಲರಾಗಿದ್ದು, ವಿಧಾನಸಭೆ ಪ್ರಧಾನ ಕಾರ್ಯದರ್ಶಿಯ ಪ್ರಶ್ನೆಗೆ ಏನು ಉತ್ತರಿಸಿದ್ದಾರೆ ಎನ್ನುವುದು ಸರಿಯಾಗಿ ಗೊತ್ತಿಲ್ಲ ಎಂದು ಹೇಳಿದ್ದಾರೆ.
ಚುನಾವಣಾ ಪ್ರಮಾಣಪತ್ರ ಸಲ್ಲಿಸಲು ವಿಫಲರಾದ ಕಾರಣ, ಹಿರಿಯ ಅಧಿಕಾರಿಗಳು ಅವರು ಪ್ರಮಾಣವಚನ ಸ್ವೀಕರಿಸುವುದನ್ನು ನಯವಾಗಿ ತಿರಸ್ಕರಿಸಿದ್ದಾರೆ. ಅವರು ಪ್ರಮಾಣಪತ್ರ ಸಲ್ಲಿಸಿದ ಬಳಿಕ, ಯಾವಾಗ ಬೇಕಾದರೂ ಪ್ರಮಾಣವಚನ ಸ್ವೀಕರಿಸಬಹುದಾಗಿದೆ ಎಂದು ಹೇಳಿದ್ದಾರೆ. ಪ್ರಮಾಣವಚನ ಸ್ವೀಕರಿಸುವ ವೇಳೆ ಕಡ್ಡಾಯವಾಗಿ ಚುನಾವಣಾ ಪ್ರಮಾಣಪತ್ರ ತರಬೇಕು ಎಂದು ಶಾಸಕರಿಗೆ ತಿಳಿಸಲಾಗಿತ್ತು ಹಾಗೂ ಸರ್ಕಾರದ ಪ್ರಕಟಣೆಯಲ್ಲಿ ತಿಳಿಸಲಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ. ಇತ್ತೀಚೆಗೆ ನಡೆದ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಶಿವಕಾಶಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಎಸ್. ಕೀರ್ತನಾ ಅವರು ಕಾಂಗ್ರೆಸ್‌ನ ಅಶೋಕನ್ ವಿರುದ್ಧ 11,670 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು. 29 ವರ್ಷದ ಅವರು ಇದೀಗ ಮುಖ್ಯಮಂತ್ರಿ ವಿಜಯ್ ಸಂಪುಟದಲ್ಲಿ ಸಚಿವೆಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಇವರು ತಮಿಳುನಾಡಿನ ಅತ್ಯಂತ ಕಿರಿಯ ಮತ್ತು ವಿಜಯ್ ಸಂಪುಟದ ಏಕೈಕ ಮಹಿಳಾ ಸಚಿವೆಯಾಗಿದ್ದಾರೆ.