ʼಕೈʼಯಲ್ಲಿ ಕರ್ನಾಟಕ ಆರ್ಥಿಕ ಸ್ಥಿತಿ ಸುಭದ್ರ: ಸಿಎಂ ಸಿದ್ದರಾಮಯ್ಯ
ಬೆಂಗಳೂರು: ಕಾಂಗ್ರೆಸ್ ಆಡಳಿತದಲ್ಲಿ ಕರ್ನಾಟಕದ ಆರ್ಥಿಕ ಪರಿಸ್ಥಿತಿ ಸುಭದ್ರವಾಗಿದೆ. ದೇಶದ ತಲಾದಾಯ 2.11 ಲಕ್ಷ ರೂ.ಗಳಾಗಿದ್ದರೆ, ಕರ್ನಾಟಕದ್ದು 4.33 ಲಕ್ಷ ರೂ. ಆಗಿದೆ. ದೇಶದ ಜಿಡಿಪಿ ಶೇ. 7.4 ಆಗಿದ್ದರೆ, ಕರ್ನಾಟಕದ್ದು ಶೇ. 8.1 ಆಗಿದೆ. ದೇಶದ ಜಿಡಿಪಿಯಲ್ಲಿ ಕರ್ನಾಟಕದ ಪಾಲು ಶೇ. 9.19 ಆಗಿದೆ. ಜಿಎಸ್‌ಟಿ ಸಂಗ್ರಹದಲ್ಲಿ ಮಹಾರಾಷ್ಟ್ರದ ನಂತರ ಕರ್ನಾಟಕದ್ದೇ ಅತ್ಯಧಿಕ ಪಾಲು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಬೆಂಗಳೂರಿನಲ್ಲಿ ಕರ್ನಾಟಕದ ರಾಜಕೀಯ ಮತ್ತು ಆರ್ಥಿಕ ಪರಿಸ್ಥಿತಿ ಬಗ್ಗೆ ನೀಡಿದ ಹೇಳಿಕೆಗೆ ಪತ್ರಿಕಾ ಪ್ರಕಟಣೆ ಮೂಲಕ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಮೋದಿ ಅವರೇ, ಕರ್ನಾಟಕವು ಅಭಿವೃದ್ದಿ ಪಥದಲ್ಲಿ ವೇಗವಾಗಿ ಸಾಗುತ್ತಿರುವುದಕ್ಕೆ ಇನ್ನೇನು ಪುರಾವೆ ಬೇಕು? ಮುಂದಿನ ಬಾರಿ ನಮ್ಮ ಸರ್ಕಾರದ ವಿರುದ್ಧ ಆರೋಪ ಮಾಡುವಾಗ ಸ್ವಲ್ಪ ಪೂರ್ವತಯಾರಿ ಮಾಡಿಕೊಂಡು ಬನ್ನಿ.
ದೇಶದ ಪ್ರಧಾನಿ ಬಾಯಲ್ಲಿ ಸುಳ್ಳು ಹೇಳಿಕೆಗಳು ಶೋಭೆಯಲ್ಲ ಎಂದು ತಿಳಿಸಿದ್ದಾರೆ. ವಿಶ್ವಾಸ ದ್ರೋಹದ ಚರಿತ್ರೆ ನೆನಪು ಮಾಡಿಕೊಳ್ಳಿ: ಪ್ರಧಾನಿ ಮೋದಿಯವರು ತಮ್ಮ ಪಕ್ಷದ ವಿಶ್ವಾಸದ್ರೋಹದ ಚರಿತ್ರೆಯನ್ನು ಒಮ್ಮೆ ನೆನಪು ಮಾಡಿಕೊಂಡಿದ್ದರೆ, ಅವರು ಖಂಡಿತ ಕಾಂಗ್ರೆಸ್ ಮೇಲೆ ವಿಶ್ವಾಸದ್ರೋಹದ ಆರೋಪ ಮಾಡುತ್ತಿರಲಿಲ್ಲ. ಬಿಎಸ್‌ಪಿ, ಟಿಎಂಸಿ, ಡಿಎಂಕೆ, ಎಐಡಿಎಂಕೆ, ಪಿಡಿಪಿ, ಶಿವಸೇನೆ, ಅಕಾಲಿದಳ, ನ್ಯಾಷನಲ್ ಕಾನ್ಫರೆನ್ಸ್ ಸೇರಿದಂತೆ ಬಿಜೆಪಿ ಜತೆ ಮೈತ್ರಿಮಾಡಿಕೊಂಡು ವಿಶ್ವಾಸದ್ರೋಹಕ್ಕೊಳಗಾದ ಪ್ರಾದೇಶಿಕ ಪಕ್ಷಗಳ ಪಟ್ಟಿ ಬೆಳೆಯುತ್ತಲೇ ಇದೆ. ಇನ್ನೊಂದೆಡೆ ಕಾಂಗ್ರೆಸ್ ಮತ್ತು ಇತರ ಪಕ್ಷಗಳ ನಾಯಕರನ್ನು ಬ್ಲ್ಯಾಕ್‌ಮೇಲ್ ಮಾಡಿ, ತಮ್ಮ ಪಕ್ಷಗಳಿಗೆ ವಿಶ್ವಾಸದ್ರೋಹ ಎಸಗುವಂತೆ ಮಾಡಿ, ಜತೆಯಲ್ಲಿ ಸೇರಿಸಿಕೊಂಡ ಪ್ರತಿಪಕ್ಷದ ನಾಯಕರ ಪಟ್ಟಿಯೂ ಬೆಳೆಯುತ್ತಿದೆ. ಇಂತಹ ವಿಶ್ವಾಸದ್ರೋಹಿ ಪಕ್ಷದ ನಾಯಕರಾದ ಮೋದಿ ಕಾಂಗ್ರೆಸ್ ವಿರುದ್ಧ ವಿಶ್ವಾಸದ್ರೋಹದ ಆರೋಪ ಮಾಡುತ್ತಿರುವುದನ್ನು ನೋಡಿ ದೇಶದ ಜನರೇ ಅಪಹಾಸ್ಯ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ಖಾದ್ಯ ತೈಲ ಎಲ್ಲವೂ ದುಬಾರಿಯಾಗಿ ದೇಶದ ಜನರ ನಿತ್ಯದ ಜೀವನ ನಿರ್ವಹಣೆಗಾಗಿ ಪರದಾಡುವಂತಹ ಪರಿಸ‍್ಥಿತಿ ನಿರ್ಮಾಣಕ್ಕೆ ದೇಶದ ಎಡಬಿಡಂಗಿ ವಿದೇಶಾಂಗ ನೀತಿ ಕಾರಣ ಎಂದು ಆರೋಪಿಸಿದ ಸಿಎಂ, ‘ನ್ಯಾಯ ಮತ್ತು ನೀತಿಯ ಪರವಾಗಿ ಗಟ್ಟಿಯಾದ ನಿಲುವು ತೆಗೆದುಕೊಂಡಿದ್ದರೆ, ಭಾರತ ಇಂದು ಈ ದುಃಸ್ಥಿತಿ ಎದುರಿಸುತ್ತಿರಲಿಲ್ಲ. ಈ ವೈಫಲ್ಯಕ್ಕೆ ಯಾರನ್ನು ದೂರುತ್ತೀರಿ? ಜವಾಹರಲಾಲ್ ನೆಹರು ಅವರನ್ನೇ? ಕಾಂಗ್ರೆಸ್ ಪಕ್ಷವನ್ನೇ? ಎಂದು ಪ್ರಧಾನಿಯನ್ನು ಕೇಳಿದ್ದಾರೆ. ಕೂಡಿಟ್ಟ ಏಡಿಗಳಾದ ಬಿಜೆಪಿ ನಾಯಕರು: ಸಿಎಂ ಕರ್ನಾಟಕದ ಬಿಜೆಪಿಯ ಸ್ಥಿತಿ ಬುಟ್ಟಿಯಲ್ಲಿ ಕೂಡಿ ಹಾಕಿರುವ ಏಡಿಗಳಂತಾಗಿದೆ. ಒಬ್ಬರ ಕಾಲನ್ನು ಮತ್ತೊಬ್ಬರು ಎಳೆದುಕೊಂಡು ರಾಜಕೀಯ ಹರಾಕಿರಿ ನಡೆಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಅವರ ಕುಟುಂಬಕ್ಕೆ ಎದುರಾಗಿ ಪಕ್ಷದೊಳಗೆ ಅರ್ಧ ಡಜನ್ ಗುಂಪುಗಳಿವೆ. ಈ ಗುಂಪುಗಳ ನಾಯಕರು ಯಡಿಯೂರಪ್ಪ ವಿರುದ್ಧ ನೂರಾರು ಆರೋಪಗಳನ್ನು ಮಾಡಿದ್ದರೂ ಅವರ ವಿರುದ್ಧ ಶಿಸ್ತಿನ ಕ್ರಮ ಕೈಗೊಳ‍್ಳುವ ಧೈರ್ಯ 56 ಇಂಚಿನ ಎದೆಯ ನಾಯಕರಲ್ಲಿ ಇಲ್ಲ. ರಾಜ್ಯ ಬಿಜೆಪಿ ಅಧ್ಯಕ್ಷರ ಮಾತಿಗೆ ಆ ಪಕ್ಷದಲ್ಲಿ ಕವಡೆಕಾಸಿನ ಕಿಮ್ಮತ್ತಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.