ಪ್ಲೇ-ಆಫ್‌ಗಾಗಿ ಜಿದ್ದಾಜಿದ್ದಿ.. ಇವತ್ತು ಆರ್‌ಸಿಬಿ vs ಕೆಕೆಆರ್ ನಡುವೆ ಹೈವೋಲ್ಟೇಜ್ ಕದನ!
IPL-2026 ಅತ್ಯಂತ ನಿರ್ಣಾಯಕ ಹಂತಕ್ಕೆ ತಲುಪಿದೆ. ಪ್ರತಿಯೊಂದು ಪಂದ್ಯವೂ ಪ್ಲೇ-ಆಫ್ ಲೆಕ್ಕಾಚಾರದಲ್ಲಿ ಮಹತ್ವ ಪಡೆದುಕೊಂಡಿದೆ. ಈ ನಡುವೆ ಬುಧವಾರದ ಹೈವೋಲ್ಟೇಜ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಭರ್ಜರಿ ಫಾರ್ಮ್‌ನಲ್ಲಿರುವ KKR ತಂಡಗಳು ಮುಖಾಮುಖಿಯಾಗುತ್ತಿವೆ.
ಇಂಡಿಯನ್ ಪ್ರೀಮಿಯರ್ ಲೀಗ್ (IPL) 2026 ಅತ್ಯಂತ ನಿರ್ಣಾಯಕ ಹಂತಕ್ಕೆ ತಲುಪಿದೆ. ಪ್ರತಿಯೊಂದು ಪಂದ್ಯವೂ ಪ್ಲೇ-ಆಫ್ ಲೆಕ್ಕಾಚಾರದಲ್ಲಿ ಮಹತ್ವ ಪಡೆದುಕೊಂಡಿದೆ. ಈ ನಡುವೆ ಬುಧವಾರದ ಹೈವೋಲ್ಟೇಜ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಭರ್ಜರಿ ಫಾರ್ಮ್‌ನಲ್ಲಿರುವ ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡಗಳು ಮುಖಾಮುಖಿಯಾಗುತ್ತಿವೆ.
ಈ ಸೀಸನ್‌ನ ಆರಂಭದಿಂದಲೂ ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದ ಆರ್‌ಸಿಬಿ, ಪ್ಲೇ-ಆಫ್ ಹಂತಕ್ಕೆ ತಲುಪಲು ಇನ್ನೂ ಸ್ವಲ್ಪ ಕಸರತ್ತು ನಡೆಸಬೇಕಿದೆ. ಆರ್‌ಸಿಬಿ ಕೈಯಲ್ಲಿ ಇನ್ನು ಮೂರು ಪಂದ್ಯಗಳಿದ್ದು, ಇತರ ತಂಡಗಳ ಫಲಿತಾಂಶದ ಮೇಲೆ ಅವಲಂಬಿತವಾಗದೆ ನೇರವಾಗಿ ಕ್ವಾಲಿಫೈ ಆಗಲು ಕನಿಷ್ಠ ಎರಡು ಗೆಲುವುಗಳು ಅಗತ್ಯವಾಗಿವೆ. ಕಳೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಕೃನಾಲ್ ಪಾಂಡ್ಯ ಅವರ ಅದ್ಭುತ ಆಟದಿಂದ ಗೆದ್ದಿದ್ದ ಆರ್‌ಸಿಬಿ, ಈಗ ಅದೇ ಲಯವನ್ನು ಮುಂದುವರಿಸುವ ಗುರಿ ಹೊಂದಿದೆ. ಮತ್ತೊಂದೆಡೆ, ಆರಂಭದಲ್ಲಿ ಮಂಕಾಗಿದ್ದ ಕೆಕೆಆರ್ ಈಗ ಫೀನಿಕ್ಸ್‌ನಂತೆ ಎದ್ದು ಬಂದಿದೆ.
ಸತತ ನಾಲ್ಕು ಪಂದ್ಯಗಳನ್ನು ಗೆದ್ದಿರುವ ಅಜಿಂಕ್ಯ ರಹಾನೆ ಸಾರಥ್ಯದ ಕೆಕೆಆರ್ ಪ್ಲೇ-ಆಫ್ ರೇಸ್‌ನಲ್ಲಿ ಬಲಿಷ್ಠವಾಗಿ ಗುರುತಿಸಿಕೊಂಡಿದೆ. ಸುನಿಲ್ ನರೈನ್ ಅವರ ಮಿತವ್ಯಯದ ಬೌಲಿಂಗ್ ಹಾಗೂ ರಿಂಕು ಸಿಂಗ್ ಮತ್ತು ಫಿನ್ ಅಲೆನ್ ಅವರ ಸ್ಫೋಟಕ ಬ್ಯಾಟಿಂಗ್ ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಆರ್‌ಸಿಬಿ ಪಾಲಿಗೆ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರ ಫಾರ್ಮ್ ದೊಡ್ಡ ತಲೆನೋವಾಗಿದೆ. ಕಳೆದ ಎರಡು ಇನಿಂಗ್ಸ್‌ಗಳಲ್ಲಿ ಕೊಹ್ಲಿ ರನ್ ಗಳಿಸಲು ಪರದಾಡುತ್ತಿದ್ದಾರೆ. ರೋಮಾರಿಯೋ ಶೆಫರ್ಡ್ ಅವರ ವೈಫಲ್ಯ ಹಾಗೂ ಫಿಲ್ ಸಾಲ್ಟ್ ಅಲಭ್ಯತೆ ತಂಡದ ಬ್ಯಾಟಿಂಗ್ ಬಲವನ್ನು ಸ್ವಲ್ಪ ಕುಗ್ಗಿಸಿದೆ. ಆದರೆ ನಾಯಕ ರಜತ್ ಪಾಟಿದಾರ್ ಮತ್ತು ಕೃನಾಲ್ ಪಾಂಡ್ಯ ತಂಡಕ್ಕೆ ಆಸರೆಯಾಗುತ್ತಿರುವುದು ಸಮಾಧಾನದ ಸಂಗತಿ.