ನನ್ನ ಇಡೀ ವೃತ್ತಿಜೀವನದಲ್ಲಿ ನಾನು ಎಂದಿಗೂ ಸ್ಕ್ರಿಪ್ಟ್ ಓದಿಲ್ಲ.. ಸಲ್ಮಾನ್ ಖಾನ್
ಮುಂಬಯಿ: ಸಲ್ಮಾನ್ ಖಾನ್ (Salman Khan) ಭಾರತೀಯ ಸಿನಿಮಾರಂಗದ ಖ್ಯಾತ ನಟರ ಪಟ್ಟಿಯಲ್ಲಿ ಕೇಳಿ ಬರುವ ಹೆಸರುಗಳಲ್ಲೊಂದು. ದಶಕಗಳಿಂದ ಹತ್ತಾರು ಬ್ಲಾಕ್‌ಬಸ್ಟರ್‌ಗಳನ್ನು ʼಟೈಗರ್ʼ ನೀಡಿದ್ದಾರೆ. ಲವರ್ ಬಾಯ್ ಆಗಿ ವೃತ್ತಿ ಬದುಕು ಆರಂಭಿಸಿದ ಅವರು ಮಾಸ್ ಮಸಾಲ ಮೂವಿಯಲ್ಲಿ ಅಬ್ಬರಿಸುವ ನಟನಾಗಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಸಲ್ಮಾನ್ ಖಾನ್ ಸಂದರ್ಶನವೊಂದರಲ್ಲಿ ಹೇಳಿರುವ ಮಾತು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಕಮರ್ಷಿಯಲ್ ಸಿನಿಮಾಗಳಲ್ಲಿ ಸಲ್ಮಾನ್ ಖಾನ್ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸ್ಕ್ರಿಪ್ಟ್ ಆಯ್ಕೆಯ ವಿಚಾರದಲ್ಲಿ ʼಸಿಕಂದರ್ʼ ನಟ ಮಾತನಾಡಿರುವುದು ಬಿಟೌನ್‌ನಲ್ಲಿ ಸದ್ದು ಮಾಡಿದೆ.
'ವೆರೈಟಿ ಇಂಡಿಯಾ' (Variety India) ಸಂಸ್ಥೆಗೆ ನೀಡಿದ ಸಂದರ್ಶನವೊಂದರಲ್ಲಿ, ತಮ್ಮ ಮುಂಬರುವ 'ಸಿಕಂದರ್' ಚಿತ್ರದ ನಟ ಸಲ್ಮಾನ್ ಖಾನ್, ತಾವು ತಮ್ಮ ಇಡೀ ಸಿನಿ ಪಯಣದಲ್ಲಿ ಇದುವರೆಗೆ ಒಂದೇ ಒಂದು ಚಿತ್ರದ ಸ್ಕ್ರಿಪ್ಟ್ (ಚಿತ್ರಕಥೆ) ಅನ್ನು ಪೂರ್ತಿಯಾಗಿ ಓದಿಲ್ಲ ಎಂದು ತಿಳಿಸಿದ್ದಾರೆ. ಈ ಸಂದರ್ಶನದ ಪ್ರೋಮೋ ಬಿಡುಗಡೆಯಾಗಿದ್ದು, ಅದರಲ್ಲಿ ಸಲ್ಮಾನ್ ತಮ್ಮ ಚಿತ್ರ ನಿರ್ಮಾಣ ಪ್ರಕ್ರಿಯೆಯ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. "ನನ್ನ ಇಡೀ ಜೀವನದಲ್ಲಿ ನಾನು ಎಂದಿಗೂ ಯಾವುದೇ ಸ್ಕ್ರಿಪ್ಟ್ ಓದಿಲ್ಲ. ನಾನು ಕಥೆಗಳನ್ನು ಬರೆದಿದ್ದೇನೆ, ಆದರೆ ಬೇರೆಯವರು ಬರೆದದ್ದನ್ನು ಓದಿಲ್ಲ," ಎಂದು ಸಲ್ಮಾನ್ ಖಾನ್ ವಿಡಿಯೊದಲ್ಲಿ ಹೇಳಿದ್ದಾರೆ.
ಇದಕ್ಕೂ ಮುನ್ನ, ತಾವು ಸಂಪೂರ್ಣ ಸ್ಕ್ರಿಪ್ಟ್ ಓದುವುದಕ್ಕಿಂತ ಹೆಚ್ಚಾಗಿ, ಚಿತ್ರದ ಒಟ್ಟಾರೆ ಕಥಾಹಂದರ ಮತ್ತು ಅದರ ಕಮರ್ಷಿಯಲ್ ಸಾಮರ್ಥ್ಯವನ್ನು ಅರ್ಥಮಾಡಿಕೊಳ್ಳಲು ಇಷ್ಟಪಡುವುದಾಗಿ ಸಲ್ಮಾನ್ ತಿಳಿಸಿದ್ದರು. ಅತಿಯಾಗಿ ಯೋಚಿಸುವುದನ್ನು ತಪ್ಪಿಸಲು ತಾವು ವಿವರವಾದ ಸ್ಕ್ರಿಪ್ಟ್ ರೀಡಿಂಗ್ ಅನ್ನು ಸ್ಕಿಪ್ ಮಾಡುವುದಾಗಿ, ಆದರೆ ಚಿತ್ರದ ಐಡಿಯಾಗಳು ಮತ್ತು ಸ್ವಂತ ಸ್ಕ್ರಿಪ್ಟ್‌ಗಳನ್ನು ಬರೆಯುವುದಾಗಿ ಅವರು ಒಪ್ಪಿಕೊಂಡಿದ್ದಾರೆ. ಐಷಾರಾಮಿ ವಾಚ್ ಕಲೆಕ್ಷನ್ ಬಗ್ಗೆ ಸಲ್ಮಾನ್ ಮಾತು.. ಇದೇ ಸಂದರ್ಭದಲ್ಲಿ ಸಲ್ಮಾನ್ ಖಾನ್ ಅವರು ತಮ್ಮ ಐಷಾರಾಮಿ ವಸ್ತುಗಳ ಖರೀದಿಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿಗಳಿಗೂ ಸ್ಪಷ್ಟನೆ ನೀಡಿದ್ದಾರೆ. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಸಲ್ಮಾನ್ ಖಾನ್ ಹೆಚ್ಚಾಗಿ ಧರಿಸುವ ವಾಚ್‌ಗಳ ಮೌಲ್ಯ ಸುಮಾರು 1 ಕೋಟಿ ರೂಪಾಯಿಗೂ ಅಧಿಕ ಇರುತ್ತದೆ ಎಂದು ವರದಿಯಾಗಿದೆ.
ಈ ಬಗ್ಗೆ ತಮಾಷೆಯ ಧಾಟಿಯಲ್ಲಿ ಮಾತನಾಡಿದ ಸೂಪರ್‌ಸ್ಟಾರ್, ಆ ಬೆಲೆಬಾಳುವ ವಾಚ್‌ಗಳು ನಿಜವಾಗಿ ತಮಗೆ ಸೇರಿದ್ದಲ್ಲ ಎಂದಿದ್ದಾರೆ. "ನೀವು ನನ್ನ ಕೈಯಲ್ಲಿ ವಾಚ್‌ಗಳನ್ನು ನೋಡ್ತೀರಲ್ಲ, ಅದರರ್ಥ ಆ ವಾಚ್‌ಗಳು ನನ್ನದೇ ಅಂತ ಅಲ್ಲ. ಅದು ಯಾವುದೋ ಒಬ್ಬ ಸ್ನೇಹಿತನದ್ದು ಅಥವಾ ಇನ್ನೊಬ್ಬ ಸ್ನೇಹಿತನ ವಾಚ್ ಆಗಿರುತ್ತೆ," ಎಂದು ನಗುತ್ತಾ ಹೇಳಿದ್ದಾರೆ. ಸಿನಿಮಾದ ವಿಚಾರಕ್ಕೆ ಬಂದರೆ ಇತ್ತೀಚೆಗಷ್ಟೇ ಸಲ್ಮಾನ್ ಖಾನ್ ಅವರು 'ರಾಜಾ ಶಿವಾಜಿ' ಚಿತ್ರದಲ್ಲಿ 'ಜೀವಾ ಮಹಾಲಾ' ಎನ್ನುವ ಪಾತ್ರದಲ್ಲಿ ಅತಿಥಿ ನಟನೆಯಾಗಿ ಕಾಣಿಸಿಕೊಂಡಿದ್ದರು. ಇನ್ನುಳಿದಂತೆ, ಸಲ್ಮಾನ್ ಖಾನ್ ಅವರ ಮುಂದೆ ಬಹುನಿರೀಕ್ಷಿತ ಚಿತ್ರ 'ಮಾತೃಭೂಮಿ' ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.