Select Location
All Locations
State
Region
City / District
ದರ ಏರಿಕೆ, ನೀಟ್ ಪ್ರಶ್ನೆಪತ್ರಿಕೆ ಸೋರಿಕೆ: ಸಚಿವ ಸಂಪುಟ ಸಭೆ ನಡೆಸಿದ ಮೋದಿ

ದರ ಏರಿಕೆ, ನೀಟ್ ಪ್ರಶ್ನೆಪತ್ರಿಕೆ ಸೋರಿಕೆ: ಸಚಿವ ಸಂಪುಟ ಸಭೆ ನಡೆಸಿದ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರ ರಾಜಧಾನಿಯಲ್ಲಿರುವ ತಮ್ಮ ಕಾರ್ಯಾಲಯ ಸೇವಾ ತೀರ್ಥದಲ್ಲಿ ಗುರುವಾರ ಕೇಂದ್ರ ಸಚಿವ ಸಂಪುಟ ಸಭೆ ನಡೆಸಿದ್ದಾರೆ. ಇದು ಈ ವರ್ಷದ ಮೊದಲ ಸಂಪುಟ ಸಭೆಯಾಗಿದೆ. ಸಂಜೆ 5ಕ್ಕೆ ಆರಂಭವಾಗಿ ತಡರಾತ್ರಿ ವರೆಗೂ ನಡೆದ ಸಭೆಯಲ್ಲಿ, 30ಕ್ಕೂ ಹೆಚ್ಚು ಸಂಪುಟ ಸಚಿವರು, 36 ಮಂದಿ ರಾಜ್ಯ ಖಾತೆ ಸಚಿವರು, ಐವರು ಸಹಾಯಕ ಸಚಿವರು ಪಾಲ್ಗೊಂಡಿದ್ದರು. ಐದು ರಾಷ್ಟ್ರಗಳ ಪ್ರವಾಸ ಮುಗಿಸಿ ವಾಪಸ್‌ ಆಗಿರುವ ಪ್ರಧಾನಿಗೆ ಆರಂಭದಲ್ಲೇ ಸ್ವಾಗತ ಕೋರಲಾಯಿತು. ಬಳಿಕ, ಪಶ್ಚಿಮ ಏಷ್ಯಾ ಬಿಕ್ಕಟ್ಟಿನಿಂದಾಗಿ ಕಚ್ಚಾ ತೈಲ ದರ ಏರಿಕೆಯಾಗಿರುವುದು, ಅದರಿಂದಾಗಿ ಉಂಟಾಗಿರುವ ಆರ್ಥಿಕ ಸಂಕಷ್ಟದ ಬಗ್ಗೆ, ಭೌಗೋಳಿಕ ರಾಜಕೀಯ ಒತ್ತಡಗಳು ಮತ್ತು ನೀಟ್‌–ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಕುರಿತು ಚರ್ಚೆಯಾಗಿದೆ. ಪ್ರಧಾನಿ ವಿದೇಶ ಪ್ರವಾಸ ಕುರಿತು ವಿದೇಶಾಂಗ ಸಚಿವರು ವಿಷಯ ಮಂಡಿಸಿದ್ದಾರೆ. ನಕ್ಸಲರ ನಿರ್ಮೂಲನೆ ವಿಚಾರವೂ ಚರ್ಚೆಗೆ ಬಂದಿದೆ. ಕಾರ್ಮಿಕ, ಅರಣ್ಯ ಮತ್ತು ರಸ್ತೆ ಸಾರಿಗೆ ಸಚಿವಾಲಯಗಳೂ ವಿಚಾರ ಮಂಡಿಸಿವೆ.

ಎನ್‌ಡಿಎ ಸರ್ಕಾರದ ಮೂರನೇ ಅವಧಿಯ ಕಾರ್ಯಕ್ಷಮತೆ, ಸಾಧಕ–ಬಾಧಕಗಳ ಬಗ್ಗೆಯೂ ಪರಿಶೀಲನೆ ನಡೆದಿರುವ ಸಾಧ್ಯತೆ ಇದೆ. ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಸಿಬಿಎಸ್‌ಇ 12ನೇ ತರಗತಿಯ ಅಂಕಪಟ್ಟಿ ದೋಷಗಳಿಗೆ ಸಂಬಂಧಿಸಿದಂತೆ ಶಿಕ್ಷಣ ಸಚಿವರನ್ನು ಮೋದಿ ಪ್ರಶ್ನಿಸುವ ಸಾಧ್ಯತೆ ಇದೆ. 2024ರಲ್ಲಿ ಅಧಿಕಾರಕ್ಕೇರಿದ ನಂತರ ಎನ್‌ಡಿಎ ಸರ್ಕಾರ ಕೈಗೊಂಡಿರುವ ಎಲ್ಲ ಕ್ರಮಗಳ ಕುರಿತು ಸಂಪುಟ ಕಾರ್ಯದರ್ಶಿಯವರಿಗೆ ವರದಿ ಸಲ್ಲಿಸುವಂತೆ ಸಚಿವರಿಗೆ ಸೂಚಿಸಲಾಗಿದೆ ಎಂದು ಸಭೆಗೂ ಮುನ್ನ ಸರ್ಕಾರದ ಮೂಲಗಳು ಮಾಹಿತಿ ನೀಡಿದ್ದವು. ಸಚಿವ ಸಂಪುಟ ಪುನರ್‌ರಚನೆ ಸಂಬಂಧ ಮಾತುಕತೆಗಳು ಕೇಳಿಬರುತ್ತಿರುವ ಹೊತ್ತಿನಲ್ಲೇ ಸಭೆ ನಡೆದಿರುವುದು ಕುತೂಹಲ ಕೆರಳಿಸಿದೆ. ಮೋದಿ ಆಡಳಿತವು ಹೊಸ ಹಾಗೂ ಯುವ ನಾಯಕರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಆಲೋಚನೆಯಲ್ಲಿದೆ. ಜೂನ್‌ 15ರ ನಂತರ ಸಂಪುಟ ಪುನರ್‌ರಚನೆಯಾಗಬಹುದು ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಯುಎಇ, ನೆದರ್ಲೆಂಡ್ಸ್‌, ಸ್ವೀಡನ್‌, ನಾರ್ವೆ ಹಾಗೂ ಇಟಲಿಗೆ ಆರು ದಿನಗಳ ಪ್ರವಾಸ ಕೈಗೊಂಡಿದ್ದ ಮೋದಿ, ಮೇ 21ರಂದು ವಾಪಸ್‌ ಆಗಿದ್ದಾರೆ.


Prajavani 49 minutes ago
Home Flash News