ದಲಿತರನ್ನು ಸಿಎಂ ಮಾಡದೇ ವಂಚಿಸುತ್ತಿರುವ ಕಾಂಗ್ರೆಸ್: ಛಲವಾದಿ ನಾರಾಯಣಸ್ವಾಮಿ ಟೀಕೆ
ಮೈಸೂರು (ಮೇ.28): ದಲಿತರನ್ನು ಸಿಎಂ ಮಾಡುತ್ತೇವೆ ಅಂತ ಕಾಂಗ್ರೆಸ್ ಪಕ್ಷ 70 ವರ್ಷದಿಂದ ವಂಚಿಸುತ್ತಿದೆ. ಹಾಗಾಗಿ, ಕಾಂಗ್ರೆಸ್ ನಲ್ಲಿರುವ ದಲಿತ ನಾಯಕರು ಸೀಡ್ ಲೆಸ್ ಮತ್ತು ಶುಗರ್ ಲೆಸ್ ರೀತಿ ಆಗಿದ್ದಾರೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಟೀಕಿಸಿದರು. ದಲಿತರನ್ನು ವೋಟ್ ಬ್ಯಾಂಕ್ ಮಾಡಿಕೊಂಡಿರುವ ಕಾಂಗ್ರೆಸ್ ಪಕ್ಷ ದಲಿತರನ್ನು ಮುಖ್ಯಮಂತ್ರಿ ಮಾಡದೆ ವಂಚಿಸುತ್ತಿದೆ. ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾದರೆ ನಮ್ಮ ತಕರಾರು ಇಲ್ಲ. ಆದರೆ ಕಾಂಗ್ರೆಸ್ ಪಕ್ಷ ದಲಿತರಿಗೆ ಬಗನಿಗೂಟ ಹೊಡೆದಿದೆ ಎಂದು ಟೀಕಿಸಿದರು.
ಆನೆ ಮರಿ ಹಾಕಲು 24 ತಿಂಗಳು ಬೇಕು. ಇದೀಗ ಕಾಂಗ್ರೆಸ್ ನಲ್ಲಿ ಕಡೆಗೂ ಆನೆ ಮರಿ ಹಾಕಿದೆ. ಕಾಂಗ್ರೆಸ್ ಹೈಕಮಾಂಡ್ ಕೂಡ ಈಗ ಬದಲಾವಣೆಗೆ ಮುಂದಾಗಿದೆ. ‘ಹೋದ್ಯಾ ಪಿಶಾಚಿ ಅಂದ್ರೆ ಬಂದ್ಯಾ ಗವಾಕ್ಷಿ ಎಂಬಂತಾಗಿದೆ ಕಾಂಗ್ರೆಸ್ ಕಥೆ. ಆದರೆ ದಲಿತರಲ್ಲಿ ಯಾರಿಗೂ ನಮಗೆ ಸಿಎಂ ಕೊಡಿ ಎಂದು ಕೇಳುವ ತಾಕತ್ತು ಇಲ್ಲ ಎಂದು ಅವರು ದೂರಿದರು. ದಲಿತರು ಸಿಎಂ ಆಗಬೇಕಾದ ಸಮಯದಲ್ಲಿ ದಲಿತರಿಗೆ ಸಮಾಧಿ ಕಟ್ಟಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದರು.
ಈಗಲಾದರೂ ದಲಿತರಾದ ಪರಮೇಶ್ವರ್ ಪರ ಅವರು ದ್ವನಿ ಎತ್ತುತ್ತಿಲ್ಲ. ಆಗ ಪರಮೇಶ್ವರ್ ಅವರನ್ನು ಸೋಲಿಸಿದ್ದರು. ಕಾಂಗ್ರೆಸ್ ನ ದಲಿತ ನಾಯಕರು ಯಾರು ಕೂಡ ಸಚಿವ ಸ್ಥಾನ ತೆಗೆದುಕೊಳ್ಳದೆ ಪ್ರತಿಭಟಿಸಬೇಕು ಎಂದು ಅವರು ಆಗ್ರಹಿಸಿದರು. ಎನ್. ರಾಚಯ್ಯ, ಸಿ. ಬಸವಲಿಂಗಪ್ಪ, ವಿ. ಶ್ರೀನಿವಾಸ ಪ್ರಸಾದ್, ಮಲ್ಲಿಕಾರ್ಜುನ ಖರ್ಗೆ, ಮುನಿಯಪ್ಪ, ಪರಮೇಶ್ವರ್ ವರೆಗೂ ದಲಿತ ನಾಯಕರಿಗೆ ಕಾಂಗ್ರೆಸ್ ಪಕ್ಷ ನಕ್ಷತ್ರ ತೋರಿಸಿ ವಂಚಿಸಿದೆ. ದಲಿತರಿಗೆ ಮೋಸ ಮಾಡಿರುವ ಕಾಂಗ್ರೆಸ್ ಪಕ್ಷಕ್ಕೆ ದಲಿತರು ಬುದ್ಧಿ ಕಲಿಸುವ ಮೂಲಕ ತಮ್ಮ ಶಕ್ತಿ ತೋರಿಸಬೇಕು ಎಂದರು.