Select Location
All Locations
State
Region
City / District
ಮಧ್ಯಪ್ರಾಚ್ಯ ಬಿಕ್ಕಟ್ಟು: ಜುಲೈ ಅಂತ್ಯದವರೆಗೆ ಇಸ್ರೇಲ್ ಸಂಚಾರ ರದ್ದುಗೊಳಿಸಿದ ಏರ್ ಇಂಡಿಯಾ

ಮಧ್ಯಪ್ರಾಚ್ಯ ಬಿಕ್ಕಟ್ಟು: ಜುಲೈ ಅಂತ್ಯದವರೆಗೆ ಇಸ್ರೇಲ್ ಸಂಚಾರ ರದ್ದುಗೊಳಿಸಿದ ಏರ್ ಇಂಡಿಯಾ

ಜೆರುಸಲೆಮ್: ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಮುಂದುವರಿದಿರುವ ಭೌಗೋಳಿಕ ಮತ್ತು ರಾಜಕೀಯ ಅಸ್ಥಿರತೆಯ ಹಿನ್ನೆಲೆಯಲ್ಲಿ, ಪ್ರಮುಖ ಭಾರತೀಯ ವಿಮಾನಯಾನ ಸಂಸ್ಥೆಯಾದ ‘ಏರ್ ಇಂಡಿಯಾ’ ಟೆಲ್ ಅವಿವ್ ಹಾಗೂ ದೆಹಲಿ ನಡುವಿನ ತನ್ನ ಎಲ್ಲಾ ವಿಮಾನಗಳ ಸಂಚಾರವನ್ನು ಜುಲೈ ಅಂತ್ಯದವರೆಗೆ ಸ್ಥಗಿತಗೊಳಿಸಿವೆ. ಇದಕ್ಕೂ ಮುನ್ನ ಜೂನ್ ಅಂತ್ಯದವರೆಗೆ ಮಾತ್ರ ವಿಮಾನ ಸಂಚಾರವನ್ನು ರದ್ದುಗೊಳಿಸಲಾಗಿತ್ತು. ಆದರೆ ಇಸ್ರೇಲ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭದ್ರತಾ ಪರಿಸ್ಥಿತಿ ಇನ್ನೂ ತಿಳಿಯಾಗದ ಕಾರಣ, ಸಂಸ್ಥೆಯು ತನ್ನ ರದ್ದತಿಯನ್ನು ಮತ್ತೊಂದು ತಿಂಗಳು ಮುಂದುವರಿಸಲು ನಿರ್ಧರಿಸಿದೆ.

ಭದ್ರತಾ ಕಾರಣಗಳಿಗಾಗಿ ನಿರ್ಧಾರ ಈ ಕುರಿತು ಮಾಹಿತಿ ನೀಡಿರುವ ಇಸ್ರೇಲ್‌ನ ಏರ್ ಇಂಡಿಯಾ ಕಾರ್ಯಾಚರಣೆಯ ಹಿರಿಯ ಅಧಿಕಾರಿಯೊಬ್ಬರು, "ಪ್ರಸ್ತುತ ಇರುವ ಪ್ರಕ್ಷುಬ್ಧ ವಾತಾವರಣ ಮತ್ತು ಭದ್ರತಾ ಕಾರಣಗಳಿಂದಾಗಿ ಜುಲೈ 31ರವರೆಗೆ ವಿಮಾನ ಸಂಚಾರವನ್ನು ಸ್ಥಗಿತಗೊಳಿಸುವ ನಿರ್ಧಾರವನ್ನು ಕೈಗೊಳ್ಳಲಾಗಿದ್ದು, ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ," ಎಂದು ತಿಳಿಸಿದ್ದಾರೆ. ಮಧ್ಯಪ್ರಾಚ್ಯದಲ್ಲಿ ಭುಗಿಲೆದ್ದಿರುವ ಸಂಘರ್ಷದಿಂದಾಗಿ ಈಗಾಗಲೇ ವಿಮಾನಯಾನ ಸಂಸ್ಥೆಗಳು ದುಬಾರಿ ಇಂಧನ ಮತ್ತು ವೈಮಾನಿಕ ವಲಯದ ನಿರ್ಬಂಧಗಳಿಂದಾಗಿ ತೀವ್ರ ಆರ್ಥಿಕ ನಷ್ಟ ಎದುರಿಸುತ್ತಿವೆ.

ಭಾರತೀಯ ವಲಸಿಗರಿಗೆ ಆತಂಕ ಯುಎಸ್ ಮತ್ತು ಇರಾನ್ ನಡುವೆ ಕದನ ವಿರಾಮ ಏರ್ಪಟ್ಟಿದ್ದರೂ, ಈ ಭಾಗದಲ್ಲಿ ಇನ್ನೂ ಸಂಪೂರ್ಣ ಶಾಂತಿ ನೆಲೆಸಿಲ್ಲ. ಹೀಗಾಗಿ ಸ್ಥಳೀಯ ಇಸ್ರೇಲಿ ಏರ್‌ಲೈನ್ಸ್‌ಗಳನ್ನು ಹೊರತುಪಡಿಸಿ, ಬಹುತೇಕ ಅಂತರರಾಷ್ಟ್ರೀಯ ವಿಮಾನಯಾನ ಸಂಸ್ಥೆಗಳು ತಮ್ಮ ಸೇವೆಯನ್ನು ಸ್ಥಗಿತಗೊಳಿಸಿವೆ. ಏರ್ ಇಂಡಿಯಾದ ಈ ಹಠಾತ್ ನಿರ್ಧಾರದಿಂದಾಗಿ ಇಸ್ರೇಲ್‌ನಲ್ಲಿ ವಾಸಿಸುತ್ತಿರುವ 40,000ಕ್ಕೂ ಹೆಚ್ಚು ಭಾರತೀಯರು ತೀವ್ರ ಕಂಗಾಲಾಗಿದ್ದಾರೆ. ವೈಯಕ್ತಿಕ, ವೃತ್ತಿಪರ ಕೆಲಸಗಳಿಗಾಗಿ ಅಥವಾ ತುರ್ತು ಪರಿಸ್ಥಿತಿಯಲ್ಲಿ ತಾಯ್ನಾಡಿಗೆ ಮರಳಲು ಕಾಯುತ್ತಿದ್ದ ಭಾರತೀಯ ಕಾರ್ಮಿಕರಿಗೆ ಈಗ ಸೀಮಿತ ವಿಮಾನಗಳ ಆಯ್ಕೆ ಮಾತ್ರ ಬಾಕಿ ಉಳಿದಿದ್ದು, ಪ್ರಯಾಣದ ವೆಚ್ಚ ದುಪ್ಪಟ್ಟಾಗಿರುವುದು ಅವರ ಆತಂಕಕ್ಕೆ ಕಾರಣವಾಗಿದೆ.


Udayavani 1 hour ago
Home Flash News