ಇರಾನ್ ಯುದ್ಧಕ್ಕೆ ಬ್ರೇಕ್: US ಹೌಸ್ ನಿರ್ಣಯ ಅಂಗೀಕಾರ, ಟ್ರಂಪ್‌ಗೆ ಭಾರಿ ಹಿನ್ನಡೆ
ವಾಷಿಂಗ್ಟನ್: ಇರಾನ್ ವಿರುದ್ಧದ ಯುದ್ಧವನ್ನು ಡೊನಾಲ್ಡ್ ಟ್ರಂಪ್ ಮುಂದುವರಿಸದಂತೆ ತಡೆಯಲು ರಿಪಬ್ಲಿಕನ್ ನೇತೃತ್ವದ ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ (ಕೆಳಮನೆ) ಬುಧವಾರ ನಿರ್ಣಯವೊಂದನ್ನು ಅಂಗೀಕರಿಸಿದೆ. ಮೂರು ತಿಂಗಳಿನಿಂದ ನಡೆಯುತ್ತಿರುವ ಸಂಘರ್ಷದ ಬಗ್ಗೆ ಅವರದ್ದೇ ಪಕ್ಷದ ಸದಸ್ಯರಲ್ಲಿ ಹೆಚ್ಚುತ್ತಿರುವ ಕಳವಳವನ್ನು ಇದು ಪ್ರತಿಬಿಂಬಿಸುತ್ತದೆ.
ಹೌಸ್ ಫಾರಿನ್ ಅಫೇರ್ಸ್ ಕಮಿಟಿಯ ಸದಸ್ಯ, ನ್ಯೂಯಾರ್ಕ್ ಸಂಸದ ಗ್ರೆಗೊರಿ ಮೀಕ್ಸ್ ಅವರು ನಿರ್ಣಯವನ್ನು ಮಂಡಿಸಿದ್ದರು. ರಿಪಬ್ಲಿಕನ್ ಪಕ್ಷದ ಸಂಸದರಾದ ಥಾಮಸ್ ಮಾಸ್ಸಿ, ಬ್ರಿಯಾನ್ ಫಿಟ್ಜ್‌ಪ್ಯಾಟ್ರಿಕ್, ಟಾಮ್ ಬ್ಯಾರೆಟ್ ಮತ್ತು ವಾರೆನ್ ಡೇವಿಡ್ಸನ್ ಅವರು ಪಕ್ಷದ ನಿಲುವನ್ನು ಮೀರಿ ಈ ಕ್ರಮವನ್ನು ಬೆಂಬಲಿಸಿದ್ದರಿಂದ, 215-208ರ ಅಲ್ಪ ಮತಗಳ ಅಂತರದಿಂದ ನಿರ್ಣಯಕ್ಕೆ ಜಯ ಸಿಕ್ಕಿದೆ ಎಂದು ಸಿಎನ್‌ಎನ್ ವರದಿ ಮಾಡಿದೆ. ಕಾಂಗ್ರೆಸ್‌ನ ಎರಡೂ ಸದನಗಳಲ್ಲಿ ಟ್ರಂಪ್ ಅವರ ಯುದ್ಧದ ಅಧಿಕಾರವನ್ನು ನಿರ್ಬಂಧಿಸಲು ಸಂಸದರು ನಡೆಸುತ್ತಿರುವ ನಿರಂತರ ಪ್ರಯತ್ನಕ್ಕೆ ಫಲ ಸಿಕ್ಕಂತಾಗಿದೆ. ಈ ಆಂದೋಲನಕ್ಕೆ ರಿಪಬ್ಲಿಕನ್ನರಿಂದಲೂ ಬೆಂಬಲ ವ್ಯಕ್ತವಾಗಿದ್ದು, ಟ್ರಂಪ್‌ಗೆ ಭಾರಿ ಹಿನ್ನಡೆಯಾಗಿದೆ.
‘ವಾರ್ ಪವರ್ಸ್ ರೆಸಲ್ಯೂಶನ್’ (ಯುದ್ಧ ಅಧಿಕಾರ ನಿರ್ಣಯ) ಅಂಗೀಕಾರವಾಗಿರುವುದು ಟ್ರಂಪ್ ಆಡಳಿತದ ನೀತಿಗಳ ವಿರುದ್ಧ ಶಾಸಕಾಂಗದೊಳಗೆ ಹೆಚ್ಚುತ್ತಿರುವ ಭಿನ್ನಾಭಿಪ್ರಾಯವನ್ನು ಎತ್ತಿ ತೋರಿಸುತ್ತದೆ ಎಂದು ವರದಿಯಾಗಿದೆ. ಈ ಶಾಸಕಾಂಗದ ಕ್ರಮವನ್ನು ‘ಸಮಕಾಲೀನ ನಿರ್ಣಯ’ ಎಂದು ಹೇಳಲಾಗಿದ್ದು, ಇದಕ್ಕೆ ಕಾಂಗ್ರೆಸ್‌ನ ಎರಡೂ ಸದನಗಳ ಅನುಮೋದನೆ ಅಗತ್ಯವಿದೆಯಾದರೂ, ಇದನ್ನು ಅಧ್ಯಕ್ಷರ ಸಹಿಗೆ ಕಳುಹಿಸುವುದಿಲ್ಲ. ಗ್ರೆಗೊರಿ ಮೀಕ್ಸ್ ಹೇಳಿದ್ದೇನು? ‘ರಿಪಬ್ಲಿಕನ್ ಪಕ್ಷದ ಕೆಲವು ಸದಸ್ಯರು ನಮ್ಮ ಪರವಾಗಿ ನಿಂತಿದ್ದಕ್ಕೆ ಸಂತೋಷವಾಗಿದೆ. ಡೆಮಾಕ್ರಟಿಕ್ ಸಹೋದ್ಯೋಗಿಗಳ ಬಗ್ಗೆ ನನಗೆ ಹೆಮ್ಮೆ ಇದೆ. ಏಕೆಂದರೆ ಪ್ರತಿಯೊಬ್ಬ ಡೆಮಾಕ್ರಾಟ್ ಸದಸ್ಯರೂ ಇದಕ್ಕೆ ಮತ ಹಾಕಿದ್ದಾರೆ’ ಎಂದು ಗ್ರೆಗೊರಿ ಮೀಕ್ಸ್ ತಿಳಿಸಿದ್ದಾರೆ. ‘ನಾವು ನಮ್ಮ ಸಾಂವಿಧಾನಿಕ ಜವಾಬ್ದಾರಿಗಳನ್ನು ನಿರ್ವಹಿಸುವುದನ್ನು ಮುಂದುವರಿಸುತ್ತೇವೆ. ಆಡಳಿತ ಮಂಡಳಿಯು ಸಂವಿಧಾನ ಮತ್ತು ನಿಯಮಗಳನ್ನು ಪಾಲಿಸದಿದ್ದಾಗ ನಾವು ನಿಯಂತ್ರಣ ಮತ್ತು ಸಮತೋಲನವನ್ನು ಕಾಯ್ದುಕೊಳ್ಳುವ ಕೆಲಸ ಮಾಡುತ್ತೇವೆ’ ಎಂದಿದ್ದಾರೆ.