ಫ್ರೆಂಚ್ ಓಪನ್ ಕಿರೀಟ ಮುಡಿಗೇರಿಸಿಕೊಂಡ 19 ವರ್ಷದ ಮಿರಾ ಆಂಡ್ರೀವಾ
Mirra Andreeva: ಪ್ಯಾರಿಸ್‌ನ ಕ್ಲೇ ಕೋರ್ಟ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಯಾಗಿದೆ. ಟೆನಿಸ್ ಜಗತ್ತು ಬೆರಗುಗಣ್ಣಿನಿಂದ ನೋಡುತ್ತಿದ್ದ 19 ವರ್ಷದ ರಷ್ಯಾದ ಯುವ ತಾರೆ ಮಿರಾ ಆಂಡ್ರೀವಾ, ರೋಲ್ಯಾಂಡ್ ಗ್ಯಾರೋಸ್ (ಫ್ರೆಂಚ್ ಓಪನ್) 2026ರ ಮಹಿಳಾ ಸಿಂಗಲ್ಸ್ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಈ ಮೂಲಕ ಫ್ರೆಂಚ್ ಓಪನ್ ಗೆದ್ದ ಎರಡನೇ ಕಿರಿಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಪ್ಯಾರಿಸ್‌ನ ಕ್ಲೇ ಕೋರ್ಟ್‌ನಲ್ಲಿ ನಡೆದ ರೋಲ್ಯಾಂಡ್ ಗ್ಯಾರೋಸ್ (ಫ್ರೆಂಚ್ ಓಪನ್) 2026ರ ಮಹಿಳಾ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿ 19 ವರ್ಷದ ರಷ್ಯಾದ ಆಟಗಾರ್ತಿ ಮಿರಾ ಆಂಡ್ರೀವಾ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ. ಜೂನ್ 6ರಂದು ನಡೆದ ಅಂತಿಮ ಹಣಾಹಣಿಯಲ್ಲಿ ಪೋಲೆಂಡ್‌ನ ಮಾಯಾ ಚ್ವಾಲಿನ್ಸ್ಕಾ ವಿರುದ್ಧ 6-3, 6-2 ನೇರ ಸೆಟ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ಆಂಡ್ರೀವಾ ತಮ್ಮ ಚೊಚ್ಚಲ ಗ್ರಾಂಡ್ ಸ್ಲಾಮ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
ಕೋರ್ಟ್ ಫಿಲಿಪ್-ಚಾಟ್ರಿಯರ್‌ನಲ್ಲಿ ನಡೆದ ಈ ಪಂದ್ಯದ ಆರಂಭದಲ್ಲಿ ಉಭಯ ಆಟಗಾರ್ತಿಯರ ನಡುವೆ ತೀವ್ರ ಪೈಪೋಟಿ ಕಂಡುಬಂತು. ಮೊದಲ ಐದು ಗೇಮ್‌ಗಳಲ್ಲಿ ಚ್ವಾಲಿನ್ಸ್ಕಾ 3-2 ಮುನ್ನಡೆ ಕಾಯ್ದುಕೊಂಡಿದ್ದರು. ಆ ನಂತರ ಆಕ್ರಮಣಕಾರಿ ಆಟಕ್ಕೆ ಮುಂದಾದ 8ನೇ ಶ್ರೇಯಾಂಕಿತೆ ಆಂಡ್ರೀವಾ, ಸತತ 9 ಗೇಮ್‌ಗಳನ್ನು ಗೆಲ್ಲುವ ಮೂಲಕ ಎದುರಾಳಿಗೆ ದಿಕ್ಕುತೋಚದಂತೆ ಮಾಡಿದರು. ಈ ಮೂಲಕ ಮೊದಲ ಸೆಟ್ ಅನ್ನು 6-3 ಅಂತರದಿಂದ ಗೆದ್ದುಕೊಂಡರು.